ಬೆಂಗಳೂರು, ಆ 01 (DaijiworldNews/PY): "ಶೀಘ್ರವೇ ಮೇಕೆದಾಟು ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿ. ನಾವು ಈ ಯೋಜನೆಗೆ ಸಹಕಾರ ನೀಡುತ್ತೇವೆ" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, "ಮೇಕೆದಾಟು ಯೋಜನೆ ಮಾಡಬಾರದು ಎಂದು ಯಾವ ಆದೇಶವೂ ಇಲ್ಲ. ಈ ಬಗ್ಗೆ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ಈ ಯೋಜನೆಗೆ ನನ್ನ ಸಂಪೂರ್ಣ ಸಹಕಾರ ಇದೆ. ನಮ್ಮ ಪಾಲಿನ ನೀರು ಬಳಕೆಗೆ ಮೇಕೆದಾಟು ಯೋಜನೆ ಮುಖ್ಯ" ಎಂದಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಆ ಯೋಜನೆ ಬಗ್ಗೆ ಅವರಿಗೆ ತಿಳಿದಿದೆ. ಪರಿಸರ ಇಲಾಖೆಗೆ ಅನುಮತಿ ಸಿಕ್ಕಿರುವಾಗ ಸಿಎಂ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಇತರೆ ಇಲಾಖೆಗಳ ಅನುಮತಿ ಪಡೆದುಕೊಳ್ಳಲಿ. ಈ ಯೋಜನೆಯಿಂದ 1 ಎಕರೆಗೂ ನೀರು ಬಳಸುವುದಿಲ್ಲ" ಎಂದು ಹೇಳಿದ್ದಾರೆ.
"ಶೀಘ್ರವೇ ಗುದ್ದಲಿ ಪೂಜೆ ಮಾಡಿ ಕೆಲಸ ಶುರು ಮಾಡಲಿ. ಬೇರೆವರನ್ನು ದೂರುತ್ತಾ ಕೂತರೆ ಕಾರ್ಯ ಸಾಧ್ಯವಿಲ್ಲ. ಕೆಲಸ ಪ್ರಾರಂಭ ಮಾಡಬೇಡಿ ಎಂದು ಯಾವುದಾದರೂ ಆದೇಶ ಇದೆಯಾ?" ಎಂದು ಪ್ರಶ್ನಿಸಿದ್ದಾರೆ.