ನವದೆಹಲಿ, ಆ 01 (DaijiworldNews/PY): "ಕರ್ನಾಟಕ ಸೇರಿದಂತೆ 10 ರಾಜ್ಯಗಳ 46 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.10ಕ್ಕಿಂತ ಅಧಿಕ ಇದ್ದು, ಜನರ ಓಡಾಟ ಹಾಗೂ ಜನಸಂದಣಿ ಸೇರುವುದನ್ನು ನಿಯಂತ್ರಿಸಲು ಆ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ಹೇರುವ ಅಗತ್ಯ ಇದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
"46 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು 53 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.5 -ಶೇ.10ರಷ್ಟಿದೆ. ಈ ಹಿನ್ನೆಲೆ ರಾಜ್ಯಗಳು ಕೊರೊನಾ ಪತ್ತೆ ಪರೀಕ್ಷೆಗಳನ್ನು ಚುರುಕುಗೊಳಿಸಬೇಕು" ಎಂದು ಕೇಂದ್ರ ಹೇಳಿದೆ.
"ಈ ಹಂತದಲ್ಲಿ ಯಾವುದೇ ರೀತಿಯಾದ ನಿರ್ಬಂಧಗಳನ್ನು ವಿಧಿಸದೇ ಇದ್ದಲ್ಲಿ ಪರಿಸ್ಥಿತಿ ಗಂಭೀರವಾಗಿರಲಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕರ್ನಾಟಕ, ತಮಿಳುನಾಡು ಸೇರಿದಂತೆ ಕೇರಳ, ಮಹಾರಾಷ್ಟ್ರ, ಮಿಜೋರಾಂ, ಅಸ್ಸಾಂ, ಒಡಿಶಾ, ಮೇಘಾಲಯ, ಮಣಿಪುರ ಹಾಗೂ ಆಂಧ್ರಪ್ರದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು.
"ಈ ರಾಜ್ಯಗಳಲ್ಲಿ ಶೇ.80ಕ್ಕಿಂತಲೂ ಅಧಿಕ ಸಕ್ರಿಯ ಪ್ರಕರಣಗಳು, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಜನರಲ್ಲಿ ವರದಿಯಾಗಿದೆ. ಈ ಕಾರಣದಿಂ ಮನೆಯವರಿಗೆ ಸೋಂಕು ಹರಡದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ" ಎಂದು ಸಚಿವಾಲಯ ಹೇಳಿದೆ.