ಬೆಂಗಳೂರು, ಆ 01 (DaijiworldNews/PY): ಆಗಸ್ಟ್ 4ರಿಂದ ಮುಂದಿನ ಶೈಕ್ಷಣಿಕ ವರ್ಷದ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅನ್ಲೈನ್ ಮೂಲಕ ಇದನ್ನು ನಡೆಸಲು ಏಕೀಕೃತ ವಿ.ವಿ ಹಾಗೂ ಕಾಲೇಜು ನಿರ್ವಹಣ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸಾಂದರ್ಭಿಕ ಚಿತ್ರ
ಪ್ರತಿವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಮಾರನೇ ದಿನವೇ ಪದವಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೆ, 2021-22ನೇ ಸಾಲಿನ ಪ್ರಕ್ರಿಯೆಯನ್ನು ಆನ್ಲೈನ್ ವ್ಯವಸ್ಥೆ ಮೂಲಕ ನಡೆಸುವ ಕಾರಣ ಹೊಸ ತಂತ್ರಾಶ ರೂಪಿಸಿರುವುದರಿಂದ ಪದವಿ ಪ್ರಕ್ರಿಯೆ ವಿಳಂಬವಾಗಿ ಆರಂಭವಾಗಲಿದೆ. ರಾಜ್ಯದ ಎಲ್ಲ ಅರ್ಹ ವಿದ್ಯಾರ್ಥಿಗಳು ಆ. 14ರಿಂದ ಏಕೀಕೃತ ವ್ಯವಸ್ಥೆಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪ್ರತೀ ಕಾಲೇಜಿನಲ್ಲೂ ಹೆಲ್ಪ್ ಡೆಸ್ಕ್ ರಚಿಸಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅಗತ್ಯವಾದ ಮಾರ್ಗದರ್ಶನ ನೀಡಲು ಇಲಾಖೆ ಸೂಚನೆ ನೀಡಿದೆ.
ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆಗಸ್ಟ್ 4ರಿಂದ https://uucms.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
2020-21ನೇ ಸಾಲಿನ ಶುಲ್ಕವನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಪದವಿ ಕೋರ್ಸ್ಗಳಿಗೆ ಅರ್ಜಿ ಶುಲ್ಕವಿಲ್ಲ. ಪ್ರವೇಶ ಶುಲ್ಕ 80 ರೂ., ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣನಿಧಿ ಶುಲ್ಕ ತಲಾ 25 ರೂ., ಎನ್ಎಸ್ಎಸ್ ಶುಲ್ಕ 90 ರೂ., ವಿದ್ಯಾಭ್ಯಾಸ ಪ್ರಮಾಣ ಪತ್ರ, ವಾಚನಾಲಯ 140 ರೂ., ಬೋಧನ 940 ರೂ., ಕ್ರೀಡಾ, ಗ್ರಂಥಾಲಯ ಶುಲ್ಕ ತಲಾ 100 ರೂ., ಲ್ಯಾಬ್ 260 ರೂ., ಸ್ಕೌಟ್ಸ್, ರೆಡ್ಕ್ರಾಸ್ ತಲಾ 50 ರೂ.,ಕಾಲೇಜು ಅಭಿವೃದ್ಧಿ 200 ರೂ. ಇರಲಿದೆ.
ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಶುಲ್ಕ 50 ರೂ., ಪ್ರವೇಶ 100 ರೂ., ಪ್ರಯೋಗಾಲಯ 300 ರೂ., ವಾಚನಾಲಯ 100 ರೂ., ಪಾಠ 1,000 ರೂ., ಕ್ರೀಡಾ, ಗ್ರಂಥಾಲಯ ಹಾಗೂ ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ ತಲಾ 100 ರೂ. ವೈದ್ಯಕೀಯ ತಪಾಸಣೆ, ವರ್ಗಾವಣೆ ಮತ್ತು ವಿದ್ಯಾಭ್ಯಾಸ ಪ್ರಮಾಣ ಪತ್ರ 100 ರೂ. ಇದರೊಂದಿಗೆ ಪ್ರವೇಶ ಶುಲ್ಕ, ನೋಂದಣಿ, ಪರೀಕ್ಷಾ ಹಾಗೂ ಇನ್ನಿತರ ಶುಲ್ಕಗಳನ್ನು ಆಯಾ ವಿ.ವಿ ವಿಧಿಸಲಿದೆ. ಎಂಬಿಎ ಸಾಮಾನ್ಯ ವಿದ್ಯಾರ್ಥಿಗಳಿಗೆ 20 ಸಾವಿರ ರೂ. ಶುಲ್ಕ ಮುಂದುವರಿಯಲಿದೆ.