ಬೆಂಗಳೂರು, ಜು 31 (DaijiworldNews/PY): "ಸುಳ್ಳಿನ ಸರದಾರ ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ಇನ್ನೊಬ್ಬರಿಲ್ಲ. ಒಳ ಮೀಸಲು ವಿಚಾರದಲ್ಲಿ ನಿಮ್ಮ ನಿಲುವನ್ನು ಈಗಲಾದರೂ ಸ್ಪಷ್ಟಪಡಿಸಿ" ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಸುಳ್ಳಿನ ಸರದಾರ ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ಇನ್ನೊಬ್ಬರಿಲ್ಲ. ಒಳ ಮೀಸಲು ವಿಚಾರದಲ್ಲಿ ನಿಮ್ಮ ನಿಲುವನ್ನು ಈಗಲಾದರೂ ಸ್ಪಷ್ಟಪಡಿಸಿ. ಅಧಿಕಾರದಲ್ಲಿದ್ದಾಗ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸದ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪ್ರತಿಪಾದನೆ ಎಂದಿಗೂ ಪ್ರಶ್ನಾರ್ಹವಾಗಿದೆ" ಎಂದು ಕಿಡಿಕಾರಿದೆ.
"ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಶೇ. 27ರಷ್ಟು ಮೀಸಲು ನೀಡುವ ಮೋದಿ ಸರ್ಕಾರದ ನಿರ್ಧಾರವನ್ನು ಸುರ್ಜೆವಾಲಾ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುಪಿಎ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ವಿಚಾರಗಳ ಪ್ರತಿಷ್ಠಾಪನೆಗೆ ಹೊರಟಿರುವುದು ಹಾಸ್ಯಾಸ್ಪದ" ಎಂದು ವ್ಯಂಗ್ಯವಾಡಿದೆ.
"ತಾನು ಹಿಂದುಳಿದ ವರ್ಗದ ಹೀರೋ ಎಂದು ಬೀಗುತ್ತಿದ್ದ ಮೀರ್ಸಾದಿಕ್ ನಿಗೆ ಮೋದಿ ಸರ್ಕಾರ ಹಿಂದುಳಿದ ವರ್ಗದವರಿಗೆ ವೈದ್ಯ ಶಿಕ್ಷಣ ಮೀಸಲು ಹೆಚ್ಚಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸೋನಿಯಾ ಗಾಂಧಿ ಪತ್ರ ಬರೆದಿದ್ದಕ್ಕೆ ಮೀಸಲು ಲಭಿಸಿತು ಎಂದು ಸುಳ್ಳು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ" ಎಂದಿದೆ.