ಬೆಂಗಳೂರು, ಜು 31 (DaijiworldNews/PY): "ಮೂರನೇ ಅಲೆ ಈಗ ಆರಂಭವಾಗುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಲಿ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ಸೋಮಶೆಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಒಂದೆಡೆ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಮತ್ತೊಂದೆಡೆ ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಯತ್ತ ಗಮನವಹಿಸಿದ್ದಾರೆ. ಮೊದಲು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಸಮಸ್ಯೆಯನ್ನು ಆಲಿಸಲು ಸೂಚನೆ ನೀಡಲಿ" ಎಂದಿದ್ದಾರೆ.
"ಕೊರೊನಾ ಎರಡನೇ ಅಲೆಯ ವೇಳೆ ಲಾಕ್ಡೌನ್ ಮಾಡುವಂತೆ ನಾನು ತಿಳಿಸಿದ್ದೆ. ಆದರೆ, ನಾನು ಕೊಟ್ಟ ಸಲಹೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿತ್ತು. ಇದರ ಪರಿಣಾಮ ಅನಾಹುತಗಳನ್ನು ಎದುರಿಸಬೇಕಾಯಿತು. ಇದೀಗ ಮೂರನೇ ಅಲೆ ಆರಂಭವಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿ" ಎಂದು ಹೇಳಿದ್ದಾರೆ.
"ಕೇರಳದಲ್ಲಿ ಕೊರೊನಾದ ಮೂರನೇ ಅಲೆ ಸ್ಪೋಟವಾಗಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯದಲ್ಲೂ ಮೂರನೇ ಅಲೆ ಶುರುವಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಕೊರೊನಾ ಮೂರನೇ ಅಲೆ ಹರಡುವ ಮುನ್ನ ಸರ್ಕಾರ ಕಟ್ಟುನಿಟ್ಟಾ ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ.