ಶಿಲ್ಲಾಂಗ್, ಜು 31 (DaijiworldNews/PY): "ಮೀನು, ಕುರಿ ಹಾಗೂ ಕೋಳಿ ಮಾಂಸಕ್ಕಿಂತ ಹೆಚ್ಚು ಗೋಮಾಂಸ ಸೇವಿಸಿ" ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯದ ನೂತನ ಪಶು ಸಂಗೋಪನೆ ಹಾಗೂ ಪಶುವೈದ್ಯ ಖಾತೆ ಸಚಿವ ಸಣ್ಬೂರ್ ಶುಲ್ಲೈ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಜನರನ್ನು ಕೋಳಿ, ಕುರಿ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಲು ಪ್ರೋತ್ಸಾಹಿಸುತ್ತೇನೆ" ಎಂದಿದ್ದಾರೆ.
ಜನರಿಗೆ ಗೋಮಾಂಸ ತಿನ್ನಲು ಉತ್ತೇಜಿಸುವ ಮುಖೇನ, ಗೋಹತ್ಯೆ ನಿಷೇಧ ಕಾನೂನನ್ನು ತಮ್ಮ ಸರ್ಕಾರ ಜಾರಿಗೆ ತರುತ್ತದೆ ಎಂದು ಜನರಲ್ಲಿರುವ ಭಯ ದೂರಗೊಳಿಸಲು ಮುಂದಾಗಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಶುಲ್ಲೈ ಅವರು ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, "ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಸ್ವತಂತ್ರರು" ಎಂದಿದ್ದಾರೆ.
ಅಸ್ಸಾಂನಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಈ ಹೊಸ ಕಾನೂನಿನಿಂದ ಮೇಘಾಲಯಕ್ಕೆ ಜಾನುವಾರು ಸಾಗಣೆ ಮೇಲೆ ಯಾವುದೇ ರೀತಿಯಾದ ಪರಿಣಾಮ ಬೀರದಂತೆ ಗಮನವಹಿಸಲು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.