ಕೊಚ್ಚಿ, ಜು.31 (DaijiworkldNews/HR): ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಚ್ಚಿಯ ಕೋತಮಂಗಲಂ ಬಳಿಯ ನೆಲ್ಲಿಕುಳಿ ಎಂಬಲ್ಲಿ ನಡೆದಿದ್ದು, ಈ ಘಟನೆ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಮೃತಳನ್ನು ಮಾನಸ ಪಿ.ವಿ (24) ಹಾಗೂ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಖಿಲ್ (32) ಎಂದು ಗುರುತಿಸಲಾಗಿದೆ.
ಮೂಲತಃ ಕಣ್ಣೂರು ನಿವಾಸಿಯಾಗಿರುವ ಮಾನಸ ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್ ಕೋರ್ಸ್ ಮಾಡುತ್ತಿದ್ದಳು. ತನ್ನ ಫ್ರೆಂಡ್ಸ್ ಜತೆ ಕೋತಮಂಗಲಂದ ನೆಲ್ಲಿಕುಳಿಯಲ್ಲಿ ರೂಮ್ನಲ್ಲಿ ಉಳಿದುಕೊಂಡಿದ್ದಳು.
ಮಾನಸ ಮತ್ತು ರಾಖಿಲ್ ಇಬ್ಬರು ಕೂಡ ಸಾಮಾಜಿಕ ಜಾಲತಾಣ ಮೂಲಕ ವರ್ಷದ ಹಿಂದೆ ಪರಿಚಿತರಾಗಿದ್ದು, ಇದಾದ ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ, ಒಂದು ತಿಂಗಳ ಹಿಂದೆ ಮಾನಸ, ಲವ್ ಬ್ರೇಕಪ್ ಮಾಡಿಕೊಳ್ಳುವುದಾಗಿ ರಾಖಿಲ್ ಬಳಿ ಹೇಳಿದ್ದಳು ಎನ್ನಲಾಗಿದ್ದು, ಇದು ಆತನ ಕೋಪಕ್ಕೆ ಕಾರಣವಾಗಿ ಕಿರುಕುಳ ನೀಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ.
ಇನ್ನು ಕೊನೆಗೆ ಆತನ ಕಿರುಕುಳ ತಾಳದೇ ಮಾನಸ, ಕಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದಾದ ಬಳಿಕ ರಾಖಿಲ್ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಪೋಷಕರ ಮನವಿ ಮೇರೆಗೆ ಆತನಿಗೆ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡಲಾಗಿತ್ತು.
ಜೈಲಿನಿಂದ ಬಿಡುಗಡೆಗೊಂದ ಬಳಿಕ ರಾಖಿಲ್ ಶುಕ್ರವಾರ ಮಧ್ಯಾಹ್ನ ಮಾನಸ ರೂಮ್ಗೆ ತೆರಳಿ, ಮಾನಸಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಆಕೆಯ ರೂಮ್ಮೇಟ್ಗಳು ಮಧ್ಯ ಪ್ರವೇಶಿಸಿದಾಗ ಗನ್ ತೋರಿಸಿ, ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಮಾನಸಳನ್ನು ಮತ್ತೊಂದು ಕೊಠಡಿಯಲ್ಲಿ ಲಾಕ್ ಮಾಡಿಕೊಂಡು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಕೊಂಡು ರಾಖಿಲ್ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.