ತಿರುವನಂತಪುರ, ಜು.31 (DaijiworkldNews/HR): ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದಾಗ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದು ಬಂದಿದೆ.
ಶನಿವಾರ ಬೆಳಿಗ್ಗೆ 7.52ಕ್ಕೆ ತಿರುವನಂತಪುರದಿಂದ ವಿಮಾನವು ಟೇಕ್ ಆಫ್ ಆಗಿತ್ತು. ಆದರೆ ವಿಮಾನದ ಕಿಟಕಿಯೊಂದರಲ್ಲಿ ಬಿರುಕು ಪತ್ತೆಯಾದ ಹಿನ್ನಲೆಯಲ್ಲಿ ವಿಮಾನವು ತುರ್ತು ಭೂಸ್ಪರ್ಶಕ್ಕಾಗಿ ಒಂದು ಗಂಟೆಯೊಳಗೆ ಇದೇ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ 8.50ಕ್ಕೆ ವಿಮಾನ ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕೊರೊನಾದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದ ಮೇಲೆ ಹೇರಿರುವ ನಿರ್ಬಂಧದಿಂದಾಗಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಈ ವಿಮಾನದಲ್ಲಿ ಸರಕುಗಳು ಮತ್ತು ಎಂಟು ಸಿಬ್ಬಂದಿ ಇದ್ದರು ಎನ್ನಲಾಗಿದೆ.
"ಟೇಕ್ ಆಫ್ಗಿಂತ ಮುನ್ನ ವಿಮಾನ ಪರಿಶೀಲನೆ ನಡೆಸಿದಾಗ, ಯಾವುದೇ ಬಿರುಕುಗಳಿರಲಿಲ್ಲ. ಹಾಗಾಗಿ, ಟೇಕ್ ಆಫ್ ವೇಳೆ ಈ ಬಿರುಕು ಉಂಟಾಗಿರಬಹುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.