ನವದೆಹಲಿ, ಜು 31 (DaijiworldNews/PY): "ಅನಾರೋಗ್ಯದ ಹಿನ್ನೆಲೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭೂಗತ ಪಾತಕಿ ಛೋಟಾ ರಾಜನ್ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರನ್ನು ಪುನಃ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"61 ವರ್ಷದ ರಾಜನ್ ಅವರಿಗೆ ಚಿಕಿತ್ಸೆ ನೀಡಿ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ" ಎಂದು ದೆಹಲಿ ಕಾರಾಗೃಹ ವಿಭಾಗದ ಡಿಜಿ ಸಂದೀಪ್ ಗೋಯಲ್ ಮಾಹಿತಿ ನೀಡಿದ್ದಾರೆ.
ಈ ಮೊದಲು ರಾಜನ್ ಅವರಿಗೆ ಕೊರೊನಾ ದೃಢಪಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ಮತ್ತೆ ಜೈಲಿಗೆ ಕರೆದೊಯ್ಯಲಾಗಿತ್ತು.
ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷಿಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ವಾಪಸ್ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.