ಬೋಪಾಲ್, ,ಜು 31(DaijiworldNews/MS): ಆನ್ಲೈನ್ ಗೇಮ್ ಫ್ರೀ ಫೈಯರ್ ಆಟಕ್ಕಾಗಿ 40,000 ರೂಪಾಯಿ ಖರ್ಚು ಮಾಡಿದ 13ರ ಬಾಲಕನೋರ್ವ ಕೊನೆಗೆ ಅತ್ಮಹತ್ಯೆಗೆ ಶರಣಾಗಿರುವ ಘಟನೆ ಛತರ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಬಾಲಕನ ತಂದೆ ರೋಗಶಾಸ್ತ್ರ ಪ್ರಯೋಗಾಲಯವನ್ನು ನಡೆಸುತ್ತಿದ್ದು, ತಾಯಿ ಛತರ್ಪುರ ಜಿಲ್ಲಾ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರದಂದು ಬಾಲಕನ ತಾಯಿ ಕೆಲಸದಲ್ಲಿದ್ದಾಗ ಅವರಿಗೆ ಬ್ಯಾಂಕ್ ಖಾತೆಯಿಂದ ಹಣದ ವಹಿವಾಟು ನಡೆದಿರುವ ಬಗ್ಗೆ ಸಂದೇಶ ಬಂದಿದೆ. ತಾಯಿಯೂ ತನ್ನ ಮಗನಿಗೆ ಕರೆ ಮಾಡಿ ಆನ್ಲೈನ್ ಗೇಮ್ಗಾಗಿ ಹಣ ಖರ್ಚು ಮಾಡಿದ್ದಕ್ಕಾಗಿ ಗದರಿಸಿದ್ದಾರೆ. ಇದರಿಂದ ಬೇಸರಗೊಂಡ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಆತನ ಅಕ್ಕ ನೋಡಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರಿಗೆ ಆತ್ಮಹತ್ಯಾ ಪತ್ರವನ್ನು ದೊರಕಿದ್ದು ಈ ವೇಳೆ ಆತ್ಮಹತ್ಯೆಯ ಕಾರಣ ಬಹಿರಂಗವಾಗಿದೆ.
ಹುಡುಗ ಆನ್ಲೈನ್ ಗೇಮ್ಗಾಗಿ ಮನಃಪೂರ್ವಕವಾಗಿ ಹಣ ಖರ್ಚು ಮಾಡುತ್ತಿದ್ದಾನೆಯೇ ಅಥವಾ ಅದಕ್ಕಾಗಿ ಬೇರೆಯವರಿಂದ ಬೆದರಿಕೆ ಹಾಕಲಾಗಿದೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.