ಮೈಸೂರು, ಜು 31 (DaijiworldNews/PY): "ಬಿಜೆಪಿಯಲ್ಲೇ ಬೆಳೆದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರದಿಂದ ಅನುದಾನ ತರಲು ಆಗಿಲ್ಲ. ಇನ್ನು ಜನತಾದಳದಿಂದ ಹೋದ ಬಸವರಾಜ ಬೊಮ್ಮಾಯಿ ಅವರಿಂದು ಅನುದಾನ ತರಲು ಸಾಧ್ಯವೇ?" ಎಂದು ವಿಪಕ್ಷನ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಬಾರಿಯ ನೆರೆ ಪರಿಹಾರವನ್ನೇ ಸರ್ಕಾರ ಇನ್ನೂ ನೀಡಿಲ್ಲ. ಮನೆ ಕಳೆದುಕೊಂಡವರಿಗೆ 10 ಸಾವಿರ ರೂ. ಪರಿಹಾರ ಸಹ ಬಂದಿಲ್ಲ. ಕೇಂದ್ರದಿಂದ ಜಿಎಸ್ಟಿ ಪಾಲು ತರಲಾಗಿಲ್ಲ. ಈವರೆಗೆ ಜನರಿಗೆ ಪರಿಹಾರದ ಹಣವೂ ಸಿಕ್ಕಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರಿಂದಲೇ ಏನೂ ಸಾಧ್ಯವಾಗಿಲ್ಲ. ಇನ್ನು ಸಿಎಂ ಬೊಮ್ಮಾಯಿ ಅವರಿಂದ ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
"ರಾಜ್ಯದಲ್ಲಿ ಮತ್ತೊಮ್ಮೆ ಜನತಾದಳದಿಂದ ಬಂದವರು ಸಿಎಂ ಆಗಿದ್ದಾರೆ. ಹೈಕಮಾಂಡ್ ಇವರ ಮಾತನ್ನು ಕೇಳುವುದು ಅನುಮಾನ" ಎಂದಿದ್ದಾರೆ.
"ಕೊರೊನಾದ ಮೂರನೇ ಅಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಏಕ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಸಚಿವರು ಇಲ್ಲದಿದ್ದರೆ ಅಧಿಕಾರಿಗಳ ಮೂಲಕ ಕೊರೊನಾ ನಿರ್ವಹಣೆ ಮಾಡಬೇಕು. ಈ ಕೆಲಸವನ್ನು ಅಧಿಕಾರಿಗಳ ಮೂಲಕ ಮಾಡಬೇಕು. ಶೀಘ್ರವೇ ಸಂಪುಟ ರಚನೆಯಾಗಬೇಕು. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರನ್ನು ತಡೆಯಬೇಕು" ಎಂದು ತಿಳಿಸಿದ್ದಾರೆ.