ರಾಮನಗರ, ಜು.30 (DaijiworldNews/HR): ರಾಜ್ಯದ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದು ನಮ್ಮ ರಾಜ್ಯದ ದುರಾದೃಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಸಂಪುಟ ರಚನೆ ವಿಳಂಬ ಮಾಡಲಾಗಿತ್ತು. ರಾಜ್ಯ ಬಿಜೆಪಿಯಲ್ಲಿ ಈಗಲೂ ಅದೇ ರೀತಿಯ ಪರಿಸ್ಥಿತಿ ಇದ್ದು, ಸಂಪುಟ ರಚನೆ ಮಾಡುವುದು ಕೂಡ ಮುಖ್ಯಮಂತ್ರಿಗೆ ಸವಾಲಾಗಲಿದೆ. ಆದಷ್ಟು, ಬೇಗನೆ ಸಿಎಂ ಬೊಮ್ಮಾಯಿ ಅವರು ಸಂಪುಟ ರಚಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು "ಸಂಪುಟ ರಚನೆಗೆ ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬೇಕು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಆದಷ್ಟು ಬೇಗನೆ ಸಚಿವ ಸಂಪುಟ ರಚಿಸಬೇಕಿದೆ. ಇದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಕೊಡಬೇಕು" ಎಂದು ಹೇಳಿದ್ದಾರೆ.