ಹುಬ್ಬಳ್ಳಿ, ಜು 30 (DaijiworldNews/PY): "ವಲಸಿಗರ ರಾಜಕೀಯ ಭವಿಷ್ಯ ಸಮಾಧಿ ಆಗುತ್ತದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಸಚಿವರಾದ ಶಾಸಕರ ರಾಜಕೀಯ ಭವಿಷ್ಯ ಸಮಾಧಿ ಆಗುತ್ತದೆ ಎಂದು ಸದನದಲ್ಲಿ ಈ ಹಿಂದೆ ನಾನು ಹೇಳಿದ್ದೆ. ಈಗ ವಲಸಿಗ ಶಾಸಕರ ಪರಿಸ್ಥಿತಿ ಅದೇ ರೀತಿ ಆಗುತ್ತದೆ" ಎಂದಿದ್ದಾರೆ.
"ಸಚಿವ ಸ್ಥಾನಕ್ಕಾಗಿ ವಲಸಿಗರು ಸೇರಿದಂತೆ ಹಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಬಿಜೆಪಿಗರಿಗೆ ರಾಜ್ಯದ ಅಭಿವೃದ್ದಿಯ ಅಗತ್ಯವಿಲ್ಲ. ಅವರಿಗೆ ಅಧಿಕಾರ ಬೇಕಾಗಿದೆ. ಆದರೆ. ವಲಸಿಗ ಶಾಸಕರ ಪರಿಸ್ಥಿತಿ ಈ ಹಿಂದೆ ನಾನು ಹೇಳಿದಂತೆ ಆಗುತ್ತದೆ" ಎಂದು ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "2019ರಲ್ಲಿ ಪ್ರವಾಹ ಆದಾಗಲೂ ಪರಿಹಾರ ನೀಡಿಲ್ಲ. ಈಗಲೂ ಪರಿಹಾರ ನೀಡುತ್ತಾರೆ ಎನ್ನುವ ಬಗ್ಗೆ ನಂಬಿಕೆ ಇಲ್ಲ. ಅವರು ದೆಹಲಿಯಲ್ಲಿ ರೆಸ್ಟ್ ತೆಗೆದುಕೊಳ್ಳಲಿ. ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಕಿಡಿಕಾರಿದ್ದಾರೆ.