ಗುಂಡ್ಲುಪೇಟೆ, ಜು 30 (DaijiworldNews/PY): "ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರಲೇಬೇಕು" ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ನಾನು ನನ್ನ ಮುಂದಿನ ಯೋಜನೆಯನ್ನು ಸ್ಪಷ್ಟಪಡಿಸಿದ್ದೇನೆ. ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕು. ಈ ನಿಟ್ಟಿನಲ್ಲಿ 130-135 ಸ್ಥಾನಗಳನ್ನು ಗೆಲ್ಲಲೇಬೇಕಿದ್ದು, ಅದಕ್ಕಾಗಿ ಪ್ರಯತ್ನಿಸುತ್ತೇನೆ" ಎಂದಿದ್ದಾರೆ.
ಸಂಪುಟ ರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಸಚಿವ ಸಂಪುಟ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದೆ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.
"ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆ ಆಗಿರುವುದು ಹಾಗೂ ಆಯ್ಕೆ ಮಾಡಿರುವ ವಿಚಾರದಲ್ಲಿ ತೃಪ್ತಿ ಇದೆ. ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಅವರಿಂದ ಇನ್ನೂ ಉತ್ತಮ ಕಾರ್ಯಗಳು ನಡೆಯಲಿ" ಎಂದಿದ್ದಾರೆ.
ಹಿಂದಿ ಸರ್ಕಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರು ಸಂಯಮ ಕಳೆದುಕೊಂಡು ಮಾತನಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.