ಬೆಂಗಳೂರು, ಜು.30 (DaijiworldNews/HR): ನೀವು ಜೆಡಿಎಸ್ಗೆ ಹೋಗಿದ್ದಾಗ ಹಿಂದುತ್ವ ಎಲ್ಲಿ ಹೋಗಿತ್ತು ಸ್ವಾರ್ಥಕ್ಕಾಗಿ ನಿಮಗೆ ಹಿಂದುತ್ವ ಬೇಕಾ? ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಯತ್ನಾಳ್ ನಡೆಸಿದ ಆರೋಪಗಳಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ, "ಯಡಿಯೂರಪ್ಪ ಅವರದ್ದು ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋದವರು. ಯಾರೋ ಒಬ್ಬರು ಮಾತಾಡಿದರೆ ಗೌರವ ಕಡಿಮೆಯಾಗುವುದಿಲ್ಲ" ಎಂದರು.
"ಯಡಿಯೂರಪ್ಪ ಹೋರಾಟದ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇಬ್ಬರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ. ಈಗ 120 ಸಂಖ್ಯೆ ತಲುಪಿದೆ. ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸ್ವಾಮೀಜಿಗಳು ಯಡಿಯೂರಪ್ಪ ಪರ ಸಮಾವೇಶ ಮಾಡಿಲ್ಲ. ಅರಮನೆ ಮೈದಾನದಲ್ಲಿ ಸ್ವಾಮೀಜಿಗಳು ಹೇಳಿದ್ದಾರೆ. ಸ್ವಾಮೀಜಿಗಳು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ. ಕಾಣಿಕೆಯಿಂದಲೇ ಸ್ವಾಮೀಜಿಗಳು ಶಾಲೆ ಕಾಲೇಜು ನಡೆಸುತ್ತಾರೆ" ಎಂದು ಹೇಳಿದ್ದಾರೆ.