ಬೆಂಗಳೂರು, ಜು 30 (DaijiworldNews/PY): ಪೆಗಾಸಸ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅನ್ನು ಟೀಕಿಸಿರುವ ರಾಜ್ಯ ಬಿಜೆಪಿ, "ಪೆಗಾಸಿಸ್ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ, ಇದು ರಾಹುಲ್ ಗಾಂಧಿ ಪ್ರಾಯೋಜಿತ ಅಂತರಾಷ್ಟ್ರೀಯ ಪ್ರಹಸನ ಎಂದೆನಿಸುತ್ತಿದೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಪೆಗಾಸಿಸ್ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ, ಇದು ರಾಹುಲ್ ಗಾಂಧಿ ಪ್ರಾಯೋಜಿತ ಅಂತಾರಾಷ್ಟ್ರೀಯ ಪ್ರಹಸನ ಎಂದೆನಿಸುತ್ತಿದೆ. ಸಂಸತ್ ಕಲಾಪವನ್ನು ಹಾಳುಗೆಡವಲೆಂದೇ ಈ ವಿಚಾರವನ್ನು ಅಗತ್ಯಕ್ಕೆ ಮೀರಿ ಚರ್ಚಿಸಲಾಗುತ್ತಿದೆ. ದೇಶದ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ್ಯ ರೂಪಿಸುತ್ತಿದೆ" ಎಂದು ಆರೋಪಿಸಿದೆ.
"ದೇಶವನ್ನು ನಾವು ಮಾತ್ರ ಆಳಬೇಕು, ಇಲ್ಲವಾದರೆ ದೇಶವನ್ನು ಹಾಳು ಮಾಡಬೇಕೆಂಬುದು ಕಾಂಗ್ರೆಸ್ ಪಕ್ಷದ ನಾಯಕರ ಧೋರಣೆ. ರಾಷ್ಟ್ರ ದ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳು ಮಂಡನೆಯಾಗಬಾರದೆಂದು ಕಾಂಗ್ರೆಸ್ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಕಾಂಗ್ರೆಸ್ ಮತ್ತು ಕ್ಯಾನ್ಸರ್, ಇವೆರಡಕ್ಕೂ ಸಾಮ್ಯತೆಯಿದೆ" ಎಂದಿದೆ.
"ಸಂಸತ್ ಅಧಿವೇಶನವನ್ನು ಕಾಂಗ್ರೆಸ್ ಈ ಹಿಂದೆ ಸಿಎಎ, ಕೃಷಿ ಹಾಗೂ ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಹಾಳುಗೆಡವಿತ್ತು. ಈ ಬಾರಿಯೂ ಕಾಂಗ್ರೆಸ್ ಅದೇ ಮಾರ್ಗ ಅನುಸರಿಸುತ್ತಿದೆ. ಅಭಿವೃದ್ಧಿಯ ಚಿಂತನೆಗಳಿಗೆ ಅಡ್ಡಿಪಡಿಸುವುದಕ್ಕಾಗಿ ರಾಹುಲ್ ಗಾಂಧಿ ನೆಪ ಅರಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದೇಶ ಕ್ಷಮಿಸದು" ಎಂದು ಎಂದು ಹೇಳಿದೆ..
"ಯುಪಿಎ ಸರ್ಕಾರ ಸತತ 10 ವರ್ಷ ಅಧಿಕಾರದಲ್ಲಿತ್ತು. ಆಗ ಸೋನಿಯಾ ಅವರಿಗೆ ಒಬಿಸಿ ಮೀಸಲು ಹೆಚ್ಚಳದ ಬಗ್ಗೆ ಜ್ಞಾನವಿರಲಿಲ್ಲವೇ ಸಿದ್ದರಾಮಯ್ಯ? ಅಧಿಕಾರದಲ್ಲಿದ್ದಾಗ ವಂಶ ಬೆಳೆಸುವುದು, ಅಧಿಕಾರ ಇಲ್ಲದಿದ್ದಾಗ ಪತ್ರ ಬರೆಯುವುದು ಕಾಂಗ್ರೆಸ್ ಚಾಳಿ. ಕಾಗೆ ಕುಳಿತ ಕಾರಣಕ್ಕೆ ಮರದ ಟೊಂಗೆ ಮುರಿಯಿತು ಎಂದ ಹಾಗಾಯ್ತು ನಿಮ್ಮ ವಾದ!" ಎಂದು ಲೇವಡಿ ಮಾಡಿದೆ.