ನವದೆಹಲಿ, ಜು 30 (DaijiworldNews/PY): ಕೊರೊನಾ ಸೋಂಕಿನ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯವು ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿತ್ತು. ಇದೀಗ ಈ ಆದೇಶವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ.
"ಈ ನಿರ್ಬಂಧ ಕೇವಲ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಮಾತ್ರ ಅನ್ವಯವಾಗಲಿದ್ದು, ಕಾರ್ಗೋ ವಿಮಾನಗಳಿಗೆ ಹಾಗೂ ನಿಯಂತ್ರಕ ಸಂಸ್ಥೆಗಳಿಂ ಅನುಮೋದಿಸಿದ ವಿಮಾನಗಳಿಗೆ ಅನ್ವಯವಾಗುವುದಿಲ್ಲ. ಸೋಂಕು ಪ್ರಕರಣದ ಆಧಾರದ ಮೇಲೆ ಅಂತರಾಷ್ಟ್ರೀಯ ನಿಗದಿತ ವಾಣಿಜ್ಯ ವಿಮಾನಗಳನ್ನು ಆಯ್ದ ಮಾರ್ಗದ ಮೂಲಕ ಹಾರಾಟಕ್ಕೆ ಅನುಮತಿಸಬಹುದಾಗಿದೆ" ಎಂದು ಡಿಜಿಸಿಎ ಹೇಳಿದೆ.
ವಿದೇಶಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿದರೆ ದೇಶದಲ್ಲಿ ಇಳಿಕೆಯಾದ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಡಿಜಿಸಿಎ ಈ ನಿರ್ಧಾರ ಕೈಗೊಂಡಿದೆ.
"ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧಿಸಿದ್ದರೂ ಕೂಡಾ ದೇಶಿಯ ವಿಮಾನಗಳ ಹಾರಾಟ ಎಂದಿನಂತೆ ಮುಂದುವರಿಯಲಿದೆ" ಎಂದು ತಿಳಿಸಿದೆ.
ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಆರ್ಭಟ ಕಡಿಮೆಗೊಂಡಿದ್ದರು, ಈಗ ಮತ್ತೆ ಕೇರಳದಲ್ಲಿ ಮೂರನೇ ಅಲೆಯ ಮುನ್ಸೂಚನೆಯಂತೆ ಕೊರೋನಾ ಸೋಂಕಿನ ಪ್ರಮಾಣ ದಿಢೀರ್ ಏರಿಕೆ ಕಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ನಿಯಂತ್ರಣ ಕ್ರಮಗಳ ಜಾರಿಗೆ ಸೂಚಿಸಿದೆ.