ವಿಜಯಪುರ, ಜು 30 (DaijiworldNews/PY): "ಮಾಜಿ ಸಿಎಂ ಯಡಿಯೂರಪ್ಪ ಅವರು ಬಸವರಾಜ್ ಬೊಮ್ಮಾಯಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಸಿಎಂ ಮಾಡಿದ್ದು" ಎಂದು ಶಾಸಕ ಬಸವನಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಸಿಎಂ ಯಡಿಯೂರಪ್ಪ ಅವರು ಬಸವರಾಜ್ ಬೊಮ್ಮಾಯಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಸಿಎಂ ಮಾಡಿದ್ದಾರೆ. ಬೇರೆ ಯಾರನ್ನೇ ಸಿಎಂ ಮಾಡಿದರೆ ಸರ್ಕಾರವನ್ನು ಬೀಳಿಸುತ್ತೇನೆ ಎಂದು ಹೆದರಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಸಿಎಂ ಪಟ್ಟಿಯಲ್ಲಿ ನನ್ನ ಹೆಸರು ಇದ್ದಿದ್ದು" ಎಂದಿದ್ದಾರೆ.
"ಯಡಿಯೂರಪ್ಪ ಅವರ ಹಗರಣಗಳು ಎಲ್ಲಿ ಹೊರಬರುತ್ತವೆ ಎಂದು ನಾನು ಸಿಎಂ ಆಗುವುದನ್ನು ಯಡಿಯೂರಪ್ಪ ಅವರು ತಪ್ಪಿಸಿದ್ದಾರೆ. ಯಡಿಯೂರಪ್ಪ ಅವರು ರಾಜ್ಯದಲ್ಲು 10 ಸಾವಿರ ಕೋಟಿಗೂ ಅಧಿಕ ಭ್ರಷ್ಟಾಚಾರವನ್ನು ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಒಂದು ವೇಳೆ ಯತ್ನಾಳ್ ಸಿಎಂ ಆದಲ್ಲಿ ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗುವ ಆತಂಕವಿತ್ತು. ಈ ಕಾರಣದಿಂದ ಧರ್ಮೇಂದ್ರ ಪ್ರಧಾನ್ ಹಾಗೂ ಬಸವರಾಜ್ ಬೊಮ್ಮಾಯಿ ಹೊರತಾಗಿ ಯಾರನ್ನೇ ಸಿಎಂ ಮಾಡಿದಲ್ಲಿ ಸರ್ಕಾರ ಬೀಳಿಸೊದಾಗಿ ಬ್ಲ್ಯಾಕ್ಮೇಲ್ ಮಾಡಿ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಆದರೆ, ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ದೂರು ಇಡುತ್ತಾರೆ ನೋಡುತ್ತಿರಿ" ಎಂದಿದ್ದಾರೆ.
"ನಾನು ಸಿಎಂ ಆಗಿದ್ದರೆ 150 ಸೀಟ್ ಗೆಲ್ಲುತ್ತಿದ್ದೆ. ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗುವ ಭಯ ಹುಟ್ಟಿತ್ತು. ಈ ಕಾರಣದಿಂದ ನಾನು ಸಿಎಂ ಆಗವುದನ್ನು ತಪ್ಪಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇದೆಲ್ಲಾ ಹೆಚ್ಚು ದಿನ ನಡೆಯೋದಿಲ್ಲ. ವಿಜಯಪುರದ ಅಭಿವೃದ್ದಿಯ 125 ಕೋಟಿ ರೂ. ಕಿತ್ತುಕೊಂಡಿದ್ಧಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ಮಾಡಿದ್ದರ ಅರ್ಥ, ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಈಗ ನೀವು ಮಾಡುತ್ತಿರುವ ಸೇವೆ ಸಾಕು. ಮನೆಯಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಆಡಿಸಿಕೊಂಡು ಕುಳಿತುಕೊಳ್ಳಿ" ಎಂದು ವ್ಯಂಗ್ಯವಾಡಿದ್ದಾರೆ.