ಮೈಸೂರು, ಜು 30 (DaijiworldNews/PY): "ನಾನು ಪಕ್ಷಕ್ಕಾಗಿ ಹಲವು ವರ್ಷಗಳಿಂದು ದುಡಿಯುತ್ತಿದ್ದೇನೆ. ಸಿಎಂ ಅಂತೂ ಮಾಡಲಿಲ್ಲ. ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಲವು ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದು, ಈ ಹಿನ್ನೆಲೆ ಬೆಂಬಲಿಗರು ನನ್ನನ್ನು ಸಿಎಂ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ರಾಜ್ಯದ ಸಿಎಂ ಆಗಿ ಆಯ್ಕೆ ಮಾಡಿದೆ. ಇದೀಗ ಈಶ್ವರಪ್ಪ ಡಿಸಿಎಂ ಆಗಲಿ ಎಂದು ಸ್ವಾಮೀಜಿಗಳು ಹಾಗೂ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದಿದ್ದಾರೆ.
ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅಥವಾ ಬಿಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಇದೀಗ ನಮ್ಮಲ್ಲಿರುವ ಗೊಂದಲಗಳು ಬಗೆಹರಿದಿವೆ. ಕಾಂಗ್ರೆಸ್ನಲ್ಲಿ ಈಗ ಗೊಂದಲಗಳು ಆರಂಭವಾಗಿವೆ" ಎಂದಿದ್ದಾರೆ.
"ಹಿರಿತನ ಪರಿಗಣಿಸಿ ಡಿಸಿಎಂ ಹುದ್ದೆ ನೀಡುವ ನಿರೀಕ್ಷೆ ಇದೆ. ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದರೂ ಕೂಡಾ ನಮಗೆ ಜನ ಸ್ಪಷ್ಟ ಬಹುಮತ ನೀಡಿಲ್ಲ. ಆದರೆ, ಅಧಿಕಾರ ನಡೆಸು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆ ನಮ್ಮಲ್ಲಿ ಕೆಲವು ಗೊಂದಲಗಳು ಇದ್ದದ್ದು ಸತ್ಯ. ಆದರೆ, ಹೈಕಮಾಂಡ್ ಬಿಜೆಪಿಯ ಎಲ್ಲಾ ಗೊಂದಲಗಳನ್ನು ನಿವಾರಿಸಿದೆ" ಎಂದು ತಿಳಿಸಿದ್ದಾರೆ.
"ನಾನೇ ಸಿಎಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ತನ್ವೀರ್ ಸೇಠ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಂ. ಬಿ.ಪಾಟೀಲ್ ಅವರು ಹೇಳಿಕೊಂಡಿದ್ದರು. ಅವರಿಗೆ ಯಾರೂ ಕೂಡಾ ಹೇಳುವವರು, ಕೇಳುವವರು ಇಲ್ಲ. ಈ ಪೈಕಿ ಮುಂದಿನ ಸಿಎಂ ಯಾರು ಎಂದು ಹೈಮಾಂಡ್ ಘೋಷಣೆ ಮಾಡಲಿ" ಎಂದಿದ್ದಾರೆ.