ನವದೆಹಲಿ, ಜು 30 (DaijiworldNews/MS): ಕೇರಳದಲ್ಲಿ ದಿನೇ ದಿನೇ ಹೊಸ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಯನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿ 'ಎಲ್ಲರೂ ಮುಂಜಾಗ್ರತಾ ಕ್ರಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಾನು ಕೇರಳದ ಸಹೋದರರು ಮತ್ತು ಸಹೋದರಿಯರಿಗೆ ಮನವಿ ಮಾಡುತ್ತೇನೆ' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. "ದಯವಿಟ್ಟು ಕಾಳಜಿ ವಹಿಸಿ" ಎಂದು ಅವರು ಮನವಿ ಮಾಡಿದ್ದಾರೆ.
ದೇಶದ ಬೇರೆ ರಾಜ್ಯಗಳಲ್ಲಿ ಕೊರೊನಾ ಆರ್ಭಟ ಇಳಿಯುತ್ತಿದ್ದರೆ ಕೇರಳದಲ್ಲಿ ಮಾತ್ರ ಏರಿಕೆಯಾಗುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ. 37.1 ರಷ್ಟು ಕೇರಳದಲ್ಲಿವೆ. ಇನ್ನು ಕೇರಳದಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಂಡವನ್ನು ಅತೀ ಶೀಘ್ರವೇ ರಾಜ್ಯಕ್ಕೆ ರವಾನಿಸಲು ನಿರ್ಧಾರ ಕೈಗೊಂಡಿದೆ. ಕೇರಳದಲ್ಲಿ ಕೊರೊನಾ ಹೊಸ ಪ್ರಕರಣಗಳ ನಿರ್ವಹಣೆಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಆರೋಗ್ಯ ಕಾಪಾಡಲು ಈ ತಂಡವು ಕೇರಳ ರಾಜ್ಯ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಸಂಸ್ಥೆಗಳಿಗೆ ನೆರವು, ಬೆಂಬಲ ಮತ್ತು ಸಲಹೆ ಸೂಚನೆ ನೀಡಲಿದೆ. ಆರು ಉನ್ನತಾಧಿಕಾರಿಗಳಿರುವ ಈ ತಂಡವು ಕೇರಳಕ್ಕೆ ಸದ್ಯದಲ್ಲೇ ಭೇಟಿ ನೀಡಲಿದೆ.
ರಾಜ್ಯದಲ್ಲಿ ದಿನನಿತ್ಯದ ಸರಾಸರಿ ಪ್ರಕರಣಗಳು 17,443 ಕ್ಕಿಂತ ಹೆಚ್ಚಿವೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯ ಶೇಕಡಾ 12.93 ರಷ್ಟು ಮತ್ತು ವಾರಕ್ಕೆ 11.97 ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ.