National
'ಭ್ರಷ್ಟಾಚಾರವೇ ಬಿಎಸ್ವೈ ಸರ್ಕಾರದ ಎರಡು ವರ್ಷದ ದೊಡ್ಡ ಸಾಧನೆ' - ಸಿದ್ದರಾಮಯ್ಯ
- Thu, Jul 29 2021 06:00:25 PM
-
ಬೆಂಗಳೂರು, ಜು 29 (DaijiworldNews/PY): "ಭ್ರಷ್ಟಾಚಾರವೇ ಬಿಎಸ್ವೈ ಸರ್ಕಾರದ ಎರಡು ವರ್ಷದ ದೊಡ್ಡ ಸಾಧನೆ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಕೆ? ಕರ್ನಾಟಕ ಕಲ್ಯಾಣವಾಗುವುದು ಬೇಡವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸರ್ಕಾರಕ್ಕೆ ಜುಲೈ 26 ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನಾ ಕಾರ್ಯಕ್ರಮವನ್ನು ಮಾಡಿ, ಕಷ್ಟದ ಕಾಲದಲ್ಲೂ ತಾವೇನೋ ಸಾಧನೆ ಮಾಡಿದ್ದೇವೆ ಎಂದು ಸುಳ್ಳುಗಳನ್ನು ಹೇಳಿದರು. ನನ್ನ ಪ್ರಕಾರ ಭ್ರಷ್ಟಾಚಾರವೇ ಇವರ ಎರಡು ವರ್ಷದ ದೊಡ್ಡ ಸಾಧನೆ" ಎಂದು ಟೀಕಿಸಿದ್ದಾರೆ.
"ಮಕ್ಕಳು ತಿನ್ನುವ ಮೊಟ್ಟೆಯಲ್ಲಿ, ಕೊರೊನಾ ಚಿಕಿತ್ಸಕ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ ಮಾಡಿದಂತಹ ಭಂಡ ಸರ್ಕಾರ ಬಿಜೆಪಿ ಅವರದು. ಇವೆಲ್ಲವನ್ನು ಸಾಕ್ಷಿ ಸಮೇತ ಸದನದಲ್ಲಿ ಪ್ರಸ್ತಾಪ ಮಾಡಿದರೆ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಆರೋಪಕ್ಕೆ ತುಟಿ ಬಿಚ್ಚಲಿಲ್ಲ" ಎಂದು ಕಿಡಿಕಾರಿದ್ದಾರೆ.
"ಕೊರೊನಾ ರೋಗದಿಂದ ಮೃತಪಟ್ಟವರ ಸಂಖ್ಯೆ ಸರ್ಕಾರ ನೀಡುವ ಅಂಕಿ ಅಂಶಗಳಿಗಿಂತ 10 ಪಟ್ಟು ಹೆಚ್ಚಿದೆ. ಮೊದಲ ಅಲೆಯಲ್ಲೇ ಲಕ್ಷಾಂತರ ಜನ ಸತ್ತಿದ್ದರೂ ಎರಡನೇ ಅಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಕೊರೊನಾ ರೋಗ ಉಲ್ಬಣಗೊಂಡ ನಂತರ ಆಕ್ಸಿಜನ್, ಬೆಡ್ ಗಳು, ಔಷಧಿಗಳು, ಆಂಬುಲೆನ್ಸ್ ಗಳ ಕೊರತೆಯಾಯಿತು. ಇದರಿಂದ ಹಲವರು ರಸ್ತೆಗಳಲ್ಲಿ ಪ್ರಾಣ ಬಿಡುವಂತಾಯಿತು. ಶವ ಸಂಸ್ಕಾರಕ್ಕೂ ಸ್ಥಳ ಸಿಗದೆ ನದಿಗಳಲ್ಲಿ ಹೆಣಗಳು ತೇಲಿ ಬಂದವು" ಎಂದಿದ್ದಾರೆ.
"ಚಾಮರಾಜನಗರದ ದುರಂತ ನಮ್ಮ ಕಣ್ಣೆದುರೇ ಇದೆ, ಆದರೂ ಕೇಂದ್ರದ ಮಂತ್ರಿ ಒಬ್ಬರು ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದು ಹೇಳುತ್ತಾರೆ. ರೋಗಿಗಳ ಸಂಬಂಧಿಕರು ತಮ್ಮವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಒದ್ದಾಡಿದ ರೀತಿಯನ್ನು ಇಡೀ ದೇಶ ಕಂಡಿದೆ" ಎಂದು ಹೇಳಿದ್ದಾರೆ.
"ರಾಜ್ಯ ಬಿಜೆಪಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತು. ಇದರಿಂದ ದಿನಗೂಲಿ ನೌಕರರು, ಆಟೋ, ವಾಹನ ಚಾಲಕರು, ಕುಶಲ ಕರ್ಮಿಗಳು, ಕೈಗಾರಿಕೆಗಳು, ಅಕ್ಕಸಾಲಿಗರು, ಸವಿತಾ ಸಮಾಜದವರು ಹೀಗೆ ದುಡಿಯುವ ವರ್ಗದ ಜನ ಕೆಲಸವಿಲ್ಲದೆ ನಷ್ಟಕ್ಕೀಡಾದರು. ಅವರ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ಕೈಕಟ್ಟಿ ಕೂತಿತ್ತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದುಡಿಯುವ ವರ್ಗದ ಜನರಿಗೆ ಸರ್ಕಾರದ ಪರವಾಗಿ ರೂ.10,000 ಲಾಕ್ ಡೌನ್ ಪರಿಹಾರದ ಹಣ ನೀಡಿ ಎಂದು ನಾನು ಹಲವು ಬಾರಿ ಪತ್ರ ಬರೆದೆ, ಮಾಧ್ಯಮಗಳ ಮೂಲಕ ಒತ್ತಾಯಿಸಿದೆ. ನನ್ನ ಮನವಿಗಲ್ಲದಿದ್ದರೂ ಬಡವರ ಕಷ್ಟಕ್ಕಾದರೂ ಬಿಜೆಪಿ ಸರ್ಕಾರದ ಹೃದಯ ಮಿಡಿಯಬೇಕಿತ್ತು" ಎಂದಿದ್ದಾರೆ.
"ಕಳೆದ ಬಾರಿಯಂತೂ ಪರಿಹಾರದ ಆಸೆ ಹುಟ್ಟಿಸಿ, ಮೂಗಿಗೆ ತುಪ್ಪ ಸವರಿ ಕೈತೊಳೆದುಕೊಂಡಿದ್ದ ಸರ್ಕಾರ ಈ ಬಾರಿ ಲಾಕ್ ಡೌನ್ ಮಾಡಿದಾಗಲಾದರೂ ಬಡಜನರ ನೆರವಿಗೆ ನಿಲ್ಲಬೇಕಿತ್ತು. ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್ ಡೌನ್ ನ ಹೆಸರನ್ನೇ ಬದಲಿಸಿ ಕೊರೊನಾ ಕರ್ಫ್ಯೂ ಎಂಬ ಹೊಸ ನಾಮಾಕರಣದೊಂದಿಗೆ ಲಾಕ್ ಡೌನ್ ಹೇರಿತು" ಎಂದು ಹೇಳಿದ್ದಾರೆ.
"ಬಡ ಜನರಿಗೆ ಕನಿಷ್ಠ 10 ಕೆ.ಜಿ ಉಚಿತ ಅಕ್ಕಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದೆ, ಆದರೆ ಬಿಜೆಪಿ ಸರ್ಕಾರ ನಮ್ಮ ಕಾಲದಲ್ಲಿ ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನೇ ಕಡಿತ ಮಾಡಿ ರಾಜ್ಯದ ಜನ ಹಸಿವಿನಿಂದ ಬಳಲುವಂತೆ ಮಾಡಿತು. ಇದನ್ನೆಲ್ಲಾ ಸರ್ಕಾರದ ಸಾಧನೆ ಎಂದು ಕರೆಯಬೇಕೋ ಅಥವಾ ವೈಫಲ್ಯವೆಂದು ಕರೆಯಬೇಕೋ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಸರ್ಕಾರ ಜಾರಿಗೊಳಿಸಿದ್ದ ಜನಪರ ಯೋಜನೆಗಳಿಗೆ ಹಣ ನೀಡುತ್ತಿಲ್ಲ, ಹೊಸ ಯೋಜನೆಗಳನ್ನೂ ಘೋಷಿಸುತ್ತಿಲ್ಲ. ಮಾತ್ತೆತ್ತಿದರೆ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ಕೊರೊನಾ ನಿರ್ವಹಣೆಗೆ ರಾಜ್ಯ ಬಿಜೆಪಿ ಸರ್ಕಾರ ಖರ್ಚು ಮಾಡಿರುವ ಒಟ್ಟು ಹಣ ರೂ. 4,000 ಕೋಟಿ. ಸಿದ್ದರಾಮಯ್ಯನವರ ಸರ್ಕಾರ ಸಾಲ ಮಾಡಿದೆ ಎನ್ನುತ್ತಾರೆ. ನಮ್ಮ 5 ವರ್ಷದ ಆಡಳಿತದಲ್ಲಿ ಮಾಡಿದ ಒಟ್ಟು ಸಾಲ ರೂ.1.25 ಲಕ್ಷ ಕೋಟಿ. ನಾನು ಅಧಿಕಾರದಿಂದ ಇಳಿಯುವಾಗ ಇದ್ದ ರಾಜ್ಯದ ಒಟ್ಟು ಸಾಲ ರೂ. 2.42 ಲಕ್ಷ ಕೋಟಿ. ಈ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ರೂ. 4.57 ಲಕ್ಷ ಕೋಟಿ. ಈಗ ಹೇಳಿ ಸಾಲ ಮಾಡಿ ತುಪ್ಪ ತಿಂದವರು ಯಾರು ಎಂದು?" ಎಂದು ಕೇಳಿದ್ದಾರೆ.
"ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚುಗಳು ರಾಜ್ಯದ ಆದಾಯದಕ್ಕಿಂತ ರೂ. 17,000 ಕೋಟಿ ಹೆಚ್ಚಿದೆ. ನೌಕರರ ಸಂಬಳ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಪಿಂಚಣಿ ಹಣ ನೀಡಲು ಸಾಲ ಮಾಡಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ರಾಜಸ್ವ ಕೊರತೆಯ ಸ್ಥಿತಿ ಎದುರಾಗಿರುವುದು ಇದೇ ಮೊದಲು ಸ್ವಾತಂತ್ರ ಬಂದ ನಂತರದಿಂದ 2014 ರ ವರೆಗೆ ಭಾರತದ ಒಟ್ಟು ಸಾಲ ರೂ.53 ಲಕ್ಷ ಕೋಟಿ ಇತ್ತು, ಪ್ರಧಾನಿ ಮೋದಿ ಅವರ 6 ವರ್ಷಗಳ ಆಡಳಿತದಲ್ಲಿ ಮಾಡಿರುವ ಸಾಲ ರೂ, 82 ಲಕ್ಷ ಕೋಟಿ. ಈಗ ದೇಶದ ಮೇಲಿರುವ ಒಟ್ಟು ಸಾಲ ರೂ.135 ಲಕ್ಷ ಕೋಟಿ. ಇದನ್ನೇ ಅಚ್ಚೇ ದಿನ್ ಎಂದು ಕರೆಯುವುದಾದರೆ ನನ್ನ ಅಭ್ಯಂತರವಿಲ್ಲ" ಎಂದಿದ್ದಾರೆ.
"ಕೊರೊನಾ ರೋಗಕ್ಕೆ ಬಳಸುವ ಔಷಧಿಗಳ ಮೇಲೂ ಜಿ.ಎಸ್.ಟಿ ಹಾಕಿದಂತಹಾ ಅಮಾನವೀಯ ಮನುಷ್ಯ ಪ್ರಧಾನಿ ಮೋದಿ. ಇದನ್ನು ಯಡಿಯೂರಪ್ಪ ಅವರಾಗಲೀ, ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರಾಗಲೀ ಯಾವತ್ತಾದರೂ ಪ್ರಶ್ನಿಸಿದ್ದಾರೆಯೇ? ಇಲ್ಲಿ ರಾಜಾಹುಲಿ, ಮೋದಿಯವರ ಮುಂದೆ ಇಲಿ" ಎಂದು ವ್ಯಂಗ್ಯವಾಡಿದ್ಧಾರೆ.
"ಗುಜರಾತ್ ನಲ್ಲಿ, ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಬಂದರೆ ಪ್ರಧಾನಿ ನರೇಂದ್ರ ಮೋದಿ ಓಡೋಡಿ ಹೋಗುತ್ತಾರೆ. ಆದರೆ ನಮ್ಮ ರಾಜ್ಯ ಕಳೆದ ಎರಡು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸಿದೆ.ಪ್ರಧಾನಿ ಮೋದಿ ಸೌಜನ್ಯಕ್ಕಾದರೂ ಒಮ್ಮೆ ಬಂದು ಹೋಗಬಹುದಿತ್ತಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು 15ನೇ ವೇತನ ಆಯೋಗ ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ರೂ. 5,495 ಕೋಟಿ ವಿಶೇಷ ಅನುದಾನವನ್ನು ತಿರಸ್ಕರಿಸಿದರು. ಡಬಲ್ ಇಂಜಿನ್ ಸರ್ಕಾರ ಬಂದರೆ ಸ್ವರ್ಗ ಸೃಷ್ಟಿಸುತ್ತೇವೆ ಎಂದಿದ್ದರು, ಇದಾ ಸ್ವರ್ಗ?" ಎಂದು ಕೇಳಿದ್ದಾರೆ.
"ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್ ಅವರು ಬಂದಾಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿ ಎಂದರೆ ಬೆಲೆ ನಿಯಂತ್ರಣ ನಮ್ಮ ಕೈಲಿಲ್ಲ ಎಂದು ಜಾರಿಕೊಂಡರು. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಪೆಟ್ರೋಲ್, ಗ್ಯಾಸ್ ಬೆಲೆ ತುಸು ಹೆಚ್ಚಾದರೂ ಬೀದಿಗಿಳಿಯುತ್ತಿದ್ದವರು ಇವರೇ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲೆ ರೂ.9, ಡೀಸೆಲ್ ಮೇಲೆ 3 ರೂಪಾಯಿ 82 ಪೈಸೆ ಅಬಕಾರಿ ಸುಂಕ ಇತ್ತು. ಈಗ ಪ್ರಧಾನಿ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ರೂ.32 ಹಾಗೂ ಡೀಸೆಲ್ ಮೇಲೆ ರೂ.33 ಅಬಕಾರಿ ಸುಂಕ ವಿಧಿಸುತ್ತಿದೆ" ಎಂದು ಆರೋಪಿಸಿದ್ದಾರೆ.
"ಕೇಂದ್ರದಲ್ಲಿ ಯು.ಪಿ.ಎ ಸರ್ಕಾರವಿದ್ದಾಗ ಅಡುಗೆ ಅನಿಲ ಬೆಲೆ ರೂ.413 ಇತ್ತು, ಈಗ ಪ್ರಧಾನಿ ಮೋದಿ ಅವರ ಅಚ್ಚೇ ದಿನ್ ನ ಪರಿಣಾಮ ಅಡುಗೆ ಅನಿಲ ಬೆಲೆ ರೂ.815 ಆಗಿದೆ. ದೇಶದ ಜನ ಬಡವರಾಗುತ್ತಿದ್ದಾರೆ, ಆದರೆ ಮೋದಿಯವರ ಆಪ್ತ ವಲಯದವರ ಆಸ್ತಿ ದುಪ್ಪಟ್ಟಾಗುತ್ತಿದೆ" ಎಂದಿದ್ದಾರೆ.
"2019-20ರ ಪ್ರವಾಹದಿಂದ 69 ಲಕ್ಷ ಎಕರೆ ಬೆಳೆ ನಷ್ಟ ಆಗಿದೆ. ರೈತರಿಗೆ ನೀಡಬೇಕಾದ ಪರಿಹಾರ ರೂ.35,000 ಕೋಟಿ ಎಂದು ಸರ್ಕಾರ ಅಂದಾಜು ಮಾಡಿ ಈ ವರೆಗೆ ರೂ. 2,500 ಕೋಟಿ ಪರಿಹಾರ ನೀಡಿದೆ. ಉಳಿದ ಪರಿಹಾರದ ಹಣ ಸಂತ್ರಸ್ತರನ್ನು ತಲುಪಲು ಇನ್ನು ಎಷ್ಟು ಶತಮಾನಗಳು ಬೇಕು ಬಿಜೆಪಿ?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಅಧಿವೇಶನವನ್ನೇ ಮಾಡಿಲ್ಲ, 371(ಜೆ) ಅಡಿ ಹೈದ್ರಾಬಾದ್ ಕರ್ನಾಟದ ಅಭಿವೃದ್ಧಿಗೆ ನೀಡಬೇಕಿದ್ದ ಅನುದಾನವನ್ನು 1 ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಕೆ? ಕರ್ನಾಟಕ ಕಲ್ಯಾಣವಾಗುವುದು ಬೇಡವೇ?" ಎಂದು ಕೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ @BSYBJP ಅವರು ತಮ್ಮ ಸರ್ಕಾರಕ್ಕೆ ಜುಲೈ 26 ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನಾ ಕಾರ್ಯಕ್ರಮವನ್ನು ಮಾಡಿ, ಕಷ್ಟದ ಕಾಲದಲ್ಲೂ ತಾವೇನೋ ಸಾಧನೆ ಮಾಡಿದ್ದೇವೆ ಎಂದು ಸುಳ್ಳುಗಳನ್ನು ಹೇಳಿದರು.
— Siddaramaiah (@siddaramaiah) July 29, 2021
ನನ್ನ ಪ್ರಕಾರ ಭ್ರಷ್ಟಾಚಾರವೇ ಇವರ ಎರಡು ವರ್ಷದ ದೊಡ್ಡ ಸಾಧನೆ. 1/21#ಭ್ರಷ್ಟ_ಬಿಜೆಪಿ pic.twitter.com/AWpmKWrCRW