ಬೆಂಗಳೂರು, ಜು 29 (DaijiworldNews/PY): ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಅನಂತ್ಕುಮಾರ್ ಅವರ ಪುತ್ರಿ ವಿಜೇತಾ ಮಾಡಿರುವ ಟ್ವೀಟ್ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
"ಕರ್ನಾಟಕ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ?. ರಾಜ್ಯದಲ್ಲಿ ಜೆಡಿಎಸ್ ಇನ್ನೂ ಬಲಿಷ್ಠವಾಗಿದೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು, ರಾಜ್ಯದಲ್ಲಿ ಜೆಡಿಎಸ್ ಇನ್ನೂ ಬಲಿಷ್ಠವಾಗಿದೆ ಎಂದು ದಿ.ಅನಂತ್ ಕುಮಾರ್ ಅವರ ವಿಜೇತಾ ಟ್ವೀಟ್ ಮಾಡಿರುವ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, "ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಅವರ ಪುತ್ರಿ ಜೆಡಿಎಸ್ಗೆ ಬಂದರೆ ಸ್ವಾಗತ. ಅವರಿಗೆ ಪಕ್ಷದಲ್ಲಿ ಉತ್ತಮ ಗೌರವ ಕೊಡುತ್ತೇವೆ" ಎಂದಿದ್ದಾರೆ.
"ರಾಜ್ಯ ರಾಜಕೀಯದಲ್ಲಿ ಮುಂಬರುವ ದಿನಗಳಲ್ಲಿ ಹಲವು ಬದಲಾವಣೆ ಆಗುತ್ತದೆ. ಎಲ್ಲವನ್ನೂ ಕಾದು ನೋಡಿ ಎಂದು ಅನಂತ್ ಕುಮಾರ್ ಅವರ ಪುತ್ರಿ ಟ್ವೀಟ್ ಮೂಲಕ ನಮ್ಮ ಪಕ್ಷದ ಬಗ್ಗೆ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ರಾಜ್ಯದಲ್ಲಿ ಜೆಡಿಎಸ್ ಇನ್ನೂ ಬಲಿಷ್ಠವಾಗಿದೆ ಎನ್ನುವ ಅವರ ಅಭಿಪ್ರಾಯಕ್ಕೆ ಲಕ್ಷಾಂತರ ಕಾರ್ಯಕರ್ತರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ತಿಳಿಸಿದ್ದಾರೆ.
"ರಾಜ್ಯದ ಪ್ರಮುಖ ನಾಯಕರಾಗಿದ್ದ ಅನಂತ್ ಕುಮಾರ್ ಅವರ ಪುತ್ರಿ ನನ್ನ ಸಹೋದರಿ ಸಮಾನ. ಅವರ ತಾಯಿ ಬರುವುದಾದರೆ ಪಕ್ಷಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ. ಅವರನ್ನು ಬಿಜೆಪಿಯಲ್ಲಿ ಗುರುತಿಸಿಲ್ಲ. ಮುಂದಿನ ರಾಜಕಾರಣದಲ್ಲಿ ಅನೇಕ ರೀತಿಯ ಬದಲಾವಣೆ ಆಗಲಿದೆ. ಅಲ್ಲಿಯ ತನಕ ನಾವು ತಾಳ್ಮೆಯಿಂದ ಕಾಯುವುದು ಮುಖ್ಯ" ಎಂದಿದ್ದಾರೆ.