ಬಳ್ಳಾರಿ, ಜು 29 (DaijiworldNews/PY): "ನನ್ನನ್ನು ಇದುವರೆಗೆ ಪಕ್ಷ ಗೌರವದಿಂದ ಕಂಡಿದ್ದು, ಎಲ್ಲಾ ಸ್ಥಾನಮಾನ ನೀಡಿದೆ. ನನಗೆ ಈಗಲೂ ಸೂಕ್ತವಾದ ಸ್ಥಾನಮಾನ ಸಿಗುವ ವಿಶ್ವಾಸವಿದೆ" ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ಜನರ ಬೆಂಬಲದಿಂದ ನಾನು ಮೇಲೆ ಬಂದಿದ್ದೇನೆ. ನನಗೆ ಪಕ್ಷವೇ ಮುಖ್ಯ ವಿನಃ ಅಧಿಕಾರ ಅಂತಸ್ತು ಮುಖ್ಯವಲ್ಲ" ಎಂದಿದ್ದಾರೆ.
"ನನಗೆ ಡಿಸಿಎಂ ಸ್ಥಾನ ಘೋಷಿಸಿಲ್ಲ ಎಂದು ನಾನು ಮುನಿಸಿಕೊಂಡು ಬಳ್ಳಾರಿಗೆ ಬಂದಿಲ್ಲ. ಮನೆಯಲ್ಲಿ ಪೂಜೆ ಇದ್ದ ಕಾರಣ ಕುಟುಂಬದೊಂದಿಗೆ ಭಾಗವಹಿಸಬೇಕಿತ್ತು. ಹಾಗಾಗಿ ಬಳ್ಳಾರಿಗೆ ಬಂದಿದ್ದೇನೆ" ಎಂದು ತಿಳಿಸಿದ್ದಾರೆ.
"ನಾನು ಏಳು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಆರು ಬಾರಿ ಗೆಲುವು ಸಾಧಿಸಿದ್ದೇನೆ. ಮೂರು ಬಾರಿ ಮಂತ್ರಿಯಾಗಿದ್ದೇನೆ. ಯಾರನ್ನು ವಾಲ್ಮೀಕಿ ಕೋಟಾದಲ್ಲಿ ಡಿಸಿಎಂ ಮಾಡಬೇಕು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಈ ಬಗ್ಗೆ ನಾನು ಪಕ್ಷ ನಿರ್ಧಾರವನ್ನು ಗೌರವಿಸುತ್ತೇನೆ. ರಮೇಶ್ ಜಾರಕಿಹೊಳಿ ಹಾಗೂ ನಾನು ಪ್ರತಿಸ್ಪರ್ಧಿಗಳಲ್ಲ" ಎಂದಿದ್ದಾರೆ.
ಪ್ರ"ಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
"ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರೂ ಸಂಕಷ್ಟದ ವೇಳೆ ಜೊತೆಯಾಗಿ ಕೆಲಸ ಮಾಡಿದ್ದೇವೆ. ಮೊನ್ನೆ ಶಾಸಕಾಂಗ ಪಕ್ಷದ ಸಭೆಯನ್ನು ಅವರ ಹೆಸರನ್ನು ಅನುಮೋದಿಸಿದ್ದು ನಾನೇ. ಅವರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ" ಎಂದಿದ್ದಾರೆ.
"ಆಪ್ತ ಸಹಾಯಕ ರಾಜಪ್ಪ ಹಣ ವಸೂಲಿ ಮಾಡಿದ ಆರೋಪಕ್ಕೆ ಒಳಗಾಗಿರುವ ಕಾರಣ ಡಿಸಿಎಂ ಸ್ಥಾನ ತಪ್ಪಲಿದೆ ಎನ್ನುವುದು ಸುಳ್ಳು. ಇದು ವದಂತಿಯಷ್ಟೇ" ಎಂದು ಹೇಳಿದ್ದಾರೆ.