ಬೆಂಗಳೂರು, ಜು 29 (DaijiworldNews/PY): "ನಾಯಕತ್ವ ಬದಲಾವಣೆಯಿಂದ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಇಷ್ಟು ದಿನ ಯಾವುದೇ ಬಿಜೆಪಿ ನಾಯಕರನ್ನ ಎಲ್ಲಿದ್ದೀರಿ ಎಂದು ಕೇಳಿದರೆ ದಿಲ್ಲಿ ದಿಲ್ಲಿ ದಿಲ್ಲಿ... ಎನ್ನುತ್ತಿದ್ದರು! ಈಗ ಖಾತೆ ಆಸೆಗಾಗಿ, ಸಿಎಂ ಮನೆ ಮುಂದೆ ನಿಂತು ಇಲ್ಲಿ ಇಲ್ಲಿ ಇಲ್ಲಿ... ಎನ್ನುತ್ತಿದ್ದಾರೆ! ನೆರೆಯಿಂದ ನೊಂದ ರಾಜ್ಯದ ಜನರು ಮಾತ್ರ ಸರ್ಕಾರವನ್ನು ಎಲ್ಲಿ ಎಲ್ಲಿ ಎಲ್ಲಿ... ಎಂದು ಕೇಳುತ್ತಿದ್ದಾರೆ!" ಎಂದು ವ್ಯಂಗ್ಯವಾಡಿದೆ.
"ಕಳೆದ ಪ್ರವಾಹಗಳಿಂಗಿಂತ ಈ ಭಾರಿಯ ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಭೀಕರ, ಲಾಕ್ಡೌನ್ನಿಂದ ಆದಾಯದ ಮೂಲವನ್ನ ಕಳೆದುಕೊಂಡ ಜನತೆಗೆ ನೆರೆ ದೊಡ್ಡ ಆಘಾತ ತಂದಿದೆ. ಸಂತ್ರಸ್ತರ ಕೈಯ್ಯಲ್ಲಿ ಹಣವಿಲ್ಲ, ತಕ್ಷಣದ ಪರಿಹಾರವಾಗಿ 10,000 ರೂ.ಗಳ ನೆರವು ನೀಡುವುದು ಅತ್ಯಗತ್ಯ. ಸಂಪುಟ ಸರ್ಕಸ್ಸಿನಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಬಗ್ಗೆ ಗಮನಿಸುವರೇ?" ಎಂದು ಪ್ರಶ್ನಿಸಿದೆ.
"ನಾಯಕತ್ವ ಬದಲಾವಣೆಯಿಂದ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. ಜಗದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ, ಈಶ್ವರಪ್ಪ ಸೆಟೆದು ಕುಳಿತಿದ್ದಾರೆ! ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ, ಒಟ್ಟಿನಲ್ಲಿ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರ ಮರೀಚಿಕೆ ಅಷ್ಟೇ." ಎಂದಿದೆ.