ನವದೆಹಲಿ, ಜು.29 (DaijiworldNews/HR): ಅನಗತ್ಯ ವಿಚಾರವನ್ನು ತೆಗೆದು ಸಮಸ್ಯೆಯಾಗುವಂತೆ ಮಾಡಲಾಗುತ್ತಿದ್ದು, ವಿಶ್ವದ ಸಾವಿರಾರು ಜನರನ್ನು ಬೇಹುಗಾರಿಕೆ ಮಾಡಲು ಸಾಧ್ಯವೇ? ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಅದೇ ಅವರ ಮೂಲ ಸಮಸ್ಯೆ. ರಾಹುಲ್ ಗಾಂಧಿ ಅಪ್ರಬುಧ್ಧರಂತೆ ಮಾತನಾಡುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಪೆಗಾಸಸ್ ವಿವಾದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಅವರು, "ಸರ್ಕಾರ ಹಾಗೂ ಸ್ಪೀಕರ್ ವೈಯಕ್ತಿಕವಾಗಿಯೇ ಮನವಿ ಮಾಡಿಕೊಂಡರೂ ಕೇಳುತ್ತಿಲ್ಲ. ಮನವಿಗೆ ಸ್ಪಂದನೆ ನೀಡಿ, ಕಲಾಪ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡುತ್ತಿಲ್ಲ. ಸದನದ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಹೇಳುವುದು ಸರಿಯಲ್ಲ" ಎಂದಿದ್ದಾರೆ.
ಇನ್ನು ಸಂಸತ್ತಿನ ಅತ್ಯಮೂಲ್ಯ ಸಮಯವನ್ನು ಸರ್ಕಾರ ವ್ಯರ್ಥ ಮಾಡಬಾರದು. ಹಣದುಬ್ಬರ, ರೈತರ ಸಮಸ್ಯೆಗಳು ಮತ್ತು ಪೆಗಾಸಸ್ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಕಲ್ಪಿಸಬೇಕು. ಸಂಸದರು ಜನರ ಧ್ವನಿಯಾಗಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಸಂಸದರು ಚರ್ಚಿಸುವುದು ಅಗತ್ಯವಿದೆ. ಆದರೆ, ಸರ್ಕಾರಕ್ಕೆ ಇಂತಹ ಯಾವುದೇ ಚರ್ಚೆ ಬೇಡವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಗುರುವಾರ ಕೂಡ ಸದನ ಪೆಗಾಸಸ್ ಬಗ್ಗೆ ಚರ್ಚೆಯಾಗಿದ್ದು, ರಾಜ್ಯಸಭೆ, ಲೋಕಸಭೆ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿದೆ.