ನವದೆಹಲಿ, ಜು 29 (DaijiworldNews/PY): ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಕೊರೊನಾ ಮಾರ್ಗಸೂಚಿ ಸಿಂಧುತ್ವವನ್ನು ಆಗಸ್ಟ್ 31ರವರೆಗೂ ವಿಸ್ತರಿಸಿದ್ದು, ಅಧಿಕ ಕೊರೊನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾಅವರು ದೇಶದ ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, "ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾದರೂ ಕೂಡಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಉಲ್ಲೇಖಿಸಿದ್ದಾರೆ.
ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
"ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಾರ ಹಾಗೂ ವ್ಯವಹಾರ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ತೃಪ್ತಿಕರ ವಿಚಾರವಾದರೂ ಕೂಡಾ ಸಂಪೂರ್ಣ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನುವ ವಿಚಾರವನ್ನು ನಾವು ತಳ್ಳಿಹಾಕುವಂತಿಲ್ಲ. ಕೊರೊನಾ ನಿರ್ಬಂಧಗಳಲ್ಲಿ ಸಡಿಲಿಕೆ ನೀಡುವ ಮೊದಲು ಮುನ್ನೆಚ್ಚರಿಕೆ ಅಗತ್ಯ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.