ಬೆಂಗಳೂರು, ಜು 29 (DaijiworldNews/PY): "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಕೂಡಾ ಜನತಾದಳದವರೇ ಸಿಎಂ ಆಗಿದ್ದಾರೆ ಎನ್ನುವ ಭಾವನೆ ನಮಗಿದೆ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸವರಾಜ ಬೊಮ್ಮಾಯಿ ಅವರು ನಮಗೆ ಸ್ನೇಹಿತರು. ಅಲ್ಲದೇ ಒಳ್ಳೆಯ ಹಿತೈಷಿಗಳು. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ಕೇಂದ್ರ ಸರ್ಕಾರ ಯಡಿಯೂರಪ್ಪ ಅವರಿಗೆ ಮಾಡಿದಂತೆ ಬೊಮ್ಮಾಯಿ ಅವರಿಗೆ ಅನ್ಯಾಯ ಮಾಡದಿರಲಿ" ಎಂದಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸರ್ಕಾರ ಸೂಕ್ತ ಸಹಕಾರ, ಅನುದಾನ ನೀಡುವುದು ಮುಖ್ಯ. ರಾಜ್ಯದ ಬೇಡಿಕೆ ಸೇರಿದಂತೆ ಇಲಾಖೆ ಹಣ, ಜಿಎಸ್ಟಿ ಹಣ ಸರಿಯಾಗಿ ರಾಜ್ಯಕ್ಕೆ ನೀಡಿ ಸಹಕರಿಸಬೇಕು ಬಸವರಾಜ ಬೊಮ್ಮಾಯಿ ಅವರಿಗೆ ನೀರಾವರಿ ಸಚಿವರಾಗಿ ಹೆಚ್ಚಿನ ಅನುಭವವಿದೆ" ಎಂದು ತಿಳಿಸಿದ್ದಾರೆ.