ಶಿವಮೊಗ್ಗ, ಜು.29 (DaijiworldNews/HR): "ಬಿಜೆಪಿ ಪಕ್ಷದಲ್ಲಿ ಶ್ರೀರಾಮನ ಆಡಳಿತ, ಕೃಷ್ಣನ ತಂತ್ರಗಾರಿಕೆಯೂ ಗೊತ್ತಿದೆ. ನಾವೆಲ್ಲರೂ ಸನ್ಯಾಸಿಗಳಲ್ಲ. ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ. ಮುಂದೆ ಬಹುಮತ ಬಂದ ಬಳಿಕ ಶ್ರೀರಾಮನ ಆದರ್ಶದಂತೆ ರಾಜ್ಯ ಆಳ್ವಿಕೆ ಮಾಡುತ್ತೇವೆ. ಆಡಿಯೋ, ವೀಡಿಯೋ ಬಹಳ ನೋಡಿದ್ದೇವೆ. ಯಾವುದಕ್ಕೂ ಸೊಪ್ಪು ಹಾಕಲ್ಲ" ಎಂದು .ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಾವಿರಾರು ಕಾರ್ಯಕರ್ತರ ನಡುವೆ ನಾನು ಒಂದು ಬಿಂದು. ಸಿಎಂ ಸ್ಥಾನಕ್ಕೆ ನನಗಿಂತಲೂ ಹಿರಿಯರಿದ್ದರು. ಬೊಮ್ಮಾಯಿ ಆಯ್ಕೆ ರಾಜಕೀಯ ದಾಳ ಅಷ್ಟೆ. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರನ್ನು ಸೂಚಿಸಿದಾಗ ನಾನೇ ಅನುಮೋದಿಸಿದ್ದು, ಬಿಜೆಪಿಯಲ್ಲಿ ನಾನೇ ಪ್ರವೀಣ ಎನ್ನುವ ಸಂಸ್ಕೃತಿ ಇಲ್ಲ. ಸಿಎಂ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ಡಿಸಿಎಂ ಆಗು ಅಂದ್ರೆ ಆಗ್ತೀನಿ, ಮಂತ್ರಿ ಆಗು ಅಂದ್ರೆ ಅದಕ್ಕೂ ಓಕೆ, ಶಾಸಕನಾಗಿಯೇ ಇರು ಅಂದ್ರೆ ಅದಕ್ಕೂ ಸೈ. ನನಗೆ ಲಾಬಿ ಎಂಬ ಪದದ ಅರ್ಥವೇ ಗೊತ್ತಿಲ್ಲ" ಎಂದರು.
ಇನ್ನು ಮಾಜಿ ಸಚಿವ ಜಗದೀಶ ಶೆಟ್ಟರ್ ಅವರು ಬೊಮ್ಮಾಯಿ ಸಂಪುಟಕ್ಕೆ ಸೇರಲ್ಲ ಎಂಬುದು ಅವರ ವೈಯಕ್ತಿಕ ನಿರ್ಧಾರ ಅದೇ ದಾರಿಯಲ್ಲಿ ನಾನು ಸಾಗುತ್ತೇನೆ ಎಂದು ಮಾಧ್ಯಮಗಳಲ್ಲಿ ಬಂದದ್ದು ಗಮನಿಸಿದೆ. ಅಂತಹದ್ದೇನಿಲ್ಲ, ಸಚಿವ ಪದವಿ ಸಾಕು ಎನ್ನಲ್ಲ. ಪಕ್ಷದ ನಾಯಕರು ಏನು ಹೇಳುತ್ತಾರೆ ಅದನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.