ಜಾರ್ಖಂಡ್, ಜು 29 (DaijiworldNews/PY): ಇಂದು ಬೆಳಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಜಾರ್ಖಂಡ್ನ ಧನ್ಬಾದ್ನ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂಎ ಸಿಸಿಟಿವಿ ದೃಶ್ಯ ಸೆರೆಯಾಗಿದ್ದು, ಅಪರಿಚಿತ ವಾಹನ ಉದ್ದೇಶಪೂರ್ವಕವಾಗಿ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಈ ವಿಚಾರವನ್ನು ಸುಪ್ರೀಂ ಕೋರ್ಟ್ನ ಬಾರ್ ಅಸೋಸಿಯೇಶನ್ನ ಹಿರಿಯ ನ್ಯಾಯಾವಾದಿ ವಿಕಾಸ್ ಸಿಂಗ್ ಅವರು ಸುಪ್ರಿಂ ಕೋರ್ಟ್ನ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಗಮನಕ್ಕೆ ತಂದಿದ್ದು, ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದಿದ್ದಾರೆ.
ಮುಂಜಾನೆ 5 ಗಂಟೆಯ ಸುಮಾರಿಗೆ ನ್ಯಾಯಾಧೀಶ ಉತ್ತಮ್ ಆನಂದ್ ಅವರು ರಸ್ತೆಯ ಒಂದು ಬದಿಯಲ್ಲಿ ಜಾಗಿಂಗ್ ಮಾಡುತ್ತಿರುವ ವೇಳೆ ಹಿಂಬದಿಯಿಂದ ಬಂದ ಟೆಂಪೋ ಉತ್ತಮ್ ಆನಂದ್ ಅವರಿಗೆ ಢಿಕ್ಕಿ ಹೊಡೆದು, ವೇಗವಾಗಿ ಮುಂದೆ ಹೋಗುತ್ತದೆ. ಸಿಸಿಟಿ ದೃಶ್ಯ ನೋಡಿದ ಬಳಿಕ ಇದು ಅಪಘಾತವೋ ಅಥವಾ ಕೊಲೆಯೋ ಎನ್ನುವ ಶಂಕೆ ಮೂಡಿದೆ.
ಮುಖ್ಯ ನ್ಯಾಯಮೂರ್ತಿ ರಮಣ ಅವರು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ತಾವು ಮಾತನಾಡಿರುವುದಾಗಿ ಹೇಳಿದರು. ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪ್ರಕರಣದ ಸಂಬಂಧ ಆಟೋ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದು, ಈತನ ಇಬ್ಬರು ಸಹಾಯಕರನ್ನೂ ಕೂಡಾ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಢಿಕ್ಕಿಯಾದ ವಾಹನವನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಕಾರಿನ ಮಾಲೀಕ ಬೇರೆ ವ್ಯಕ್ತಿಯಾಗಿದ್ದು, ಕಾರನ್ನು ಕದ್ದುತಂದು ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
"ಇತ್ತೀಚೆಗೆ ಉತ್ತಮ್ ಆನಂದ್ ಅವರು ಹೈಪ್ರೋಫೈಲ್ ಪ್ರಕರಣವೊಂದರ ವಿಚಾರಣೆ ನಡೆಸಿದ್ದರು. ಆ ಪ್ರಕರಣದ ಆರೋಪಿಗಳಿಗೆ ಜಾಮೀನಿ ನೀಡಲು ನಿರಾಕರಿಸಿದ್ದರು. ಈ ಕಾರಣದಿಂದ ಹತ್ಯೆ ಮಾಡಿರಬಹುದು" ಎಂದು ಪೊಲೀಸರು ತಿಳಿಸಿದ್ದಾರೆ.