ಬೆಂಗಳೂರು, ಜು 29 (DaijiworldNews/PY): "ಸಚಿವ ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರ. ಮುಖ್ಯಮಂತ್ರಿಗಳ ತೀರ್ಮಾನಕ್ಕೆ ನಾನು ಬದ್ದ" ಎಂದು ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಸಿಎಂ ಅವರು ತೀರ್ಮಾನಿಸುತ್ತಾರೆ. ಇದು ಅವರ ಪರಮಾಧಿಕಾರ. ನಾವು ಅವರ ತೀರ್ಮಾನಕ್ಕೆ ಬದ್ಧರಾಗಿರಬೇಕು" ಎಂದು ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ಹಿರಿಯರು. ಯಾವ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಶೆಟ್ಟರ್ ಅವರೊಂದಿಗೆ ನಾನು ಚರ್ಚಿಸುತ್ತೇನೆ. ಉಳಿದ ಹಿರಿಯರ ತೀರ್ಮಾನದ ಬಗ್ಗೆ ನನಗೆ ತಿಳಿದಿಲ್ಲ" ಎಂದಿದ್ದಾರೆ.
"ಶೆಟ್ಟರ್ ತೆಗೆದುಕೊಂಡಿರುವ ತೀರ್ಮಾನ ಅವರ ವೈಯುಕ್ತಿಕ ವಿಚಾರ. ನಾನು ಈ ಬಗ್ಗೆ ಗೊಂದಲ ಸೃಷ್ಟಿಸಲು ಹೋಗುವುದಿಲ್ಲ. ಯಾರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ನನಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮೊದಲ ಸಚಿವ ಸಂಪುಟದಲ್ಲಿ ಉತ್ತಮ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಮೊದಲ ದಿನವೇ ಆಡಳಿತ ದಿಕ್ಸೂಚಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸರ್ಕಾರವು ಜನಪರ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಲಿದೆ" ಎಂದು ತಿಳಿಸಿದ್ದಾರೆ.