ಹಾಸನ, ಜು 29 (DaijiworldNews/PY): ಅಪಹರಣಕ್ಕೊಳಗಾದ ಯುವಕನನ್ನು ಚಲಿಸುತ್ತಿದ್ದ ಕಾರಿನಿಂದ ರಕ್ಷಿಸಿದ್ದು ಅಲ್ಲದೇ, ಈರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಸಾಹಸದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೇರಳದ ಕಾಸರಗೋಡಿನಲ್ಲಿ ಬೇಕಲ್ ಪಟ್ಟಣದ ನಿವಾಸಿ ಅನ್ವರ್ ಕಪರ್ಟ್ (33) ಎಂಬಾತನನ್ನು ಬುಧವಾರ ಅಪಹರಿಸಲಾಗಿತ್ತು. ಸಿಲ್ವರ್ ಬಣ್ಣದ ಹುಂಡೈ ಕ್ರೆಟಾ ಎಸ್ಯುವಿಯಲ್ಲಿ ಆತನನ್ನು ಬೆಂಗಳೂರಿನ ಕಡೆಗೆ ಕರೆದೊಯ್ಯಲಾಗುತ್ತಿದೆ ಎನ್ನುವ ಮಾಹಿತಿಯನ್ನು ಕೇರಳ ಪೊಲೀಸರು ರವಾನಿಸಿದ್ದರು. ಹಾಸನ ಜಿಲ್ಲಾ ಪೊಲೀಸರು ಕಾಸರಗೋಡು ಪೊಲೀಸರೊಂದಿಗೆ ಸಮನ್ವಯ ಸಾಧಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಅವರು ಕಾರು ಸಾಗುವ ಮಾರ್ಗವನ್ನು ಹಾಗೂ ಅಪಹರಣಕ್ಕೊಳಗಾಗಿದ್ದವನ ನೆಟ್ವರ್ಕ್ ಆಧರಿಸಿ ಕಣ್ಗಾವಲಿನಲ್ಲಿರಿಸಿದ್ದು, ಸಕಲೇಶಪುರದಲ್ಲಿ ಕಾರು ತಡೆಯುವ ಯೋಜನೆ ರೂಪಿಸಿ ಅಲ್ಲಿನ ಠಾಣೆಗೆ ಸಂದೇಶ ರವಾನಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಸಕಲೇಶಪುರ ಪೊಲೀಸರು ಬ್ಯಾರಿಕೇಡ್ ಇರಿಸಿ ಟೋಲ್ಗೇಟ್ ಬಳಿ ಕಾರನ್ನು ತಡೆಯಲು ತಯಾರಾಗಿದ್ದರು. ಆದರೆ, ವೇಗವಾಗಿ ಬಂದ ಅಪಹರಣಕಾರರ ಕಾರು ಬ್ಯಾರಿಕೇಡ್ಗೆ ಗುದ್ದಿ ಬೀಳಿಸಿ ಹಾಸನದ ಕಡೆಗೆ ಚಲಿಸಿತ್ತು.
ಅಪಹರಣಕಾರರನ್ನು ಬೆನ್ನಟ್ಟಿದ ಪೊಲೀಸರು ಈ ಕಾರನ್ನು ತಡೆಯಲು ಸಿದ್ದವಾಗುವಂತೆ ಆಲೂರು ಠಾಣೆಗೆ ಸಂದೇಶ ರವಾನಿಸಿದ್ದಾರೆ. ಮಾಹಿತಿಯ ಮೇರೆಗೆ ಆಲೂರು ಪೊಲೀಸರು ಕಾರನ್ನು ತಡೆಯಲು ಬ್ಯಾರಿಕೇಡ್ಗಳನ್ನು ಅಡ್ಡವಿರಿಸಿದ್ದರು. ಈ ವೇಳೆ ಏಕಾಏಕಿ ವೇಗ ಹೆಚ್ಚಿಸಿಕೊಂಡ ಚಾಲಕ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ. ಆ ಸಂದರ್ಭ ಪೊಲೀಸರು ತಮ್ಮ ಪ್ರಾಣ ಉಳಿಸಿಲು ರಸ್ತೆ ಬದಿಗೆ ನೆಗೆದಿದ್ದಾರೆ. ಈ ವೇಳೆ ಚಾಲಕ ಹಾಸನ ಮಾರ್ಗವಾಗಿ ಮುಂದೆ ಸಾಗಿದ್ದಾನೆ. ಅಪಹರಣಕಾರರು ಗೊರೂರು ರಸ್ತೆ ಮೂಲಕ ಸಾಗುತ್ತಿರುವುದನ್ನು ಪತ್ತೆ ಮಾಡಿದ ಎಎಸ್ಪಿ, ಗೊರೂರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಸಕಲೇಶಪುರ ಹಾಗೂ ಬೈರಾಪುರದಲ್ಲಿ ಬ್ಯಾರಿಕೇಡ್ಗೆ ಗುದ್ದಿ ಮುನ್ನುಗ್ಗಿದ ಕಾರಿನ ಬಗ್ಗೆ ಎಚ್ಚರ ವಹಿಸಿದ ಪಿಎಸ್ಐ ಸಾಗರ್ ಹಾಗೂ ಸಿಬ್ಬಂದಿಗಳು ಜೆಸಿಬಿ ಹಾಗೂ ಒಂದು ಲಾರಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಕಾರು, ಮುಂದಕ್ಕೆ ಹೋಗಲು ಜಾಗವಿಲ್ಲದ ಕಾರಣ ನಿಧಾನಗೊಂಡಿತು.
ಪೊಲೀಸರು ರಸ್ತೆಯ ಎರಡೂ ಬದಿ ಬಂದ್ ಮಾಡಿದ್ದರು. ಆದರೆ, ಕಾರು ಡಿವೈಡರ್ ದಾಟಿ ವಾಪಾಸ್ಸು ಹೋಗಲು ಅವಕಾಶವಿದೆ ಎನ್ನುವುದನ್ನು ಮರೆತು ಆ ಭಾಗವನ್ನು ಖಾಲಿ ಬಿಟ್ಟಿದ್ದರು. ಕಾರಿನ ಚಾಲಕ ಆ ಜಾಗವನ್ನು ಉಪಯೋಗಿಸಿಕೊಂಡಿದ್ದು, ಕಾರನ್ನು ಡಿವೈಡರ್ ದಾಟಿಸಿ ಬಲಕ್ಕೆ ಹೊರಳಿಸಲು ಮುಂದಾಗಿದ್ದ. ಆ ಸಂದರ್ಭ ಕಾರಿನ ಬಳಿಗೆ ಓಡಿ ಬಂದ ಸಿಬ್ಬಂದಿ ಕಾರಿನ ಹಿಂಬಂಧಿ ಬಾಗಿಲನ್ನು ತೆಗೆದು ಅಲ್ಲಿ ಕುಳಿತಿದ್ದ ಅನ್ವರ್ ಕಪರ್ಟ್ನನ್ನು ರಕ್ಷಿಸಿದ್ದಾರೆ. ಆದರೆ, ಅಪಹರಣಕಾರರು ಕಾರು ಸಮೇತ ಪರಾರಿಯಾಗಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ಬೆನ್ನಟ್ಟಿದ್ದು, ಬನವಾಸೆ ಗ್ರಾಮದ ಬಳಿ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಂತರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಓರ್ವ ಅಪಹರಣಕಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನ್ವರ್ ಜೊತೆ ಹಣಕಾಸಿನ ವಿಚಾರದಲ್ಲಿ ವಿವಾದಹೊಂದಿದ್ದ ವ್ಯಕ್ತಿಗಳೇ ಆತನನ್ನು ದುಷ್ಕರ್ಮಿಗಳ ಮೂಲಕ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡು ಹಣ ವಸೂಲಿ ಮಾಡುವ ಉದ್ದೇಶವಿಟ್ಟುಕೊಂಡಿದ್ದರು ಎನ್ನಲಾಗಿದೆ. ಕಾರಿನಲ್ಲಿದ್ದ ಅನ್ವರ್ ಕಪರ್ಟ್ ಅವರನ್ನು ಕಾಸರಗೋಡು ಪೊಲೀಸರ ವಶಕ್ಕೆ ನೀಡಲಾಗಿದೆ.
ಈ ಬಗ್ಗೆ ಕಾಸರಗೋಡಿನ ಬೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.