ಬೆಂಗಳೂರು, ಜು.29 (DaijiworldNews/HR): ಈ ವಾರ ಸಂಪುಟ ರಚನೆ ಆಗುವುದಿಲ್ಲ. ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆಯಿದ್ದು, ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಶುಭ ಕೋರಿದ್ದು, ಉತ್ತಮ ಆಡಳಿತ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ. ದೆಹಲಿ ಭೇಟಿಯ ವೇಳೆ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರನ್ನು, ಸಚಿವರನ್ನು ಭೇಟಿಯಾಗುತ್ತೇನೆ" ಎಂದರು.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ಸ್ಥಳಗಳಿಗೆ ಇಂದು ಪ್ರವಾಸಕ್ಕೆ ತೆರಳುತ್ತಿದ್ದು,ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಾನಾ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದು ಅಧಿಕಾರಿಗಳ ಬಳಿ ಚರ್ಚೆ ನಡೆಸಲಿದ್ದೇನೆ. ಭೇಟಿ ನೀಡಿ ಪ್ಯಾಕೇಜ್ ಘೋಷಣೆಯ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ.
ಕಾರವಾರ ಪ್ರವಾಸಕ್ಕೂ ಮುನ್ನ ಕಾವೇರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.