ಬೆಂಗಳೂರು, ಜು 28 (DaijiworldNews/MS): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಮೊದಲ ಪತ್ರಿಕಾಗೋಷ್ಟಿಯಲ್ಲಿ ಹಲವು ಮಹತ್ವದ ಘೋಷಣೆ ಮಾಡಿದ್ದು ರಾಜ್ಯದಲ್ಲಿ ದಕ್ಷ, ಪ್ರಮಾಣಿಕ, ಕಟ್ಟಕಡೆಯ ಸಮಾಜದ ಪರ ಸರ್ಕಾರ ಇರಬೇಕು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೂರ್ಣಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿಲ್ಲ, ನಾನೊಬ್ಬನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಆದರೂ ಆಡಳಿತದಲ್ಲಿ ಯಾವುದೇ ಕೆಲಸಗಳು ನಿಲ್ಲುವುದಿಲ್ಲ.ಇಂದು ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಸಭೆಯಲ್ಲಿ ಸರ್ಕಾರದ ದಿಕ್ಸೂಚಿ ಬಗ್ಗೆ ಹೇಳಿದ್ದೇನೆ. ಟೀಂ ಆಗಿ ವರ್ಕ್ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದರು.
ಇದೇ ವೇಳೆ ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಹೊಸ ಶಿಷ್ಯ ವೇತನ ಜಾರಿಗೆ ತರಲು ₹೧೦೦೦ ಕೋಟಿ ಅನುದಾನ ಮೀಸಲಿಸಿದ್ದು ರೈತರ ಮಕ್ಕಳಿಗೆ ಹೊಸ ಶಿಷ್ಯ ವೇತನ ಜಾರಿ ಮಾಡಲಾಗುವುದು ಎಂದರು.
ಇದರೊಂದಿಗೆ ವಿಧವಾ ವೇತನವನ್ನು 600 ರೂ.ನಿಂದ 800 ರೂ. ಕ್ಕೆ ಹೆಚ್ಚಿಸಲಾಗಿದೆ. ವಿಶೇಷ ಚೇತನರಿಗೆ ವೇತನ 600 ರೂ.ನಿಂದ 800 ರೂ. ಹೆಚ್ಚಳ, ಸಂದ್ಯ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ 1000 ರೂನಿಂದ 1,200 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.