ನವದೆಹಲಿ, ಜು 28 (DaijiworldNews/PY): ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿ ಕೆಲವೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಅವರ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಪಕ್ಷಕ್ಕೆ ಹಾಗೂ ಕರ್ನಾಟಕ ರಾಜ್ಯದ ಬೆಳವಣಿಗೆಗೆ ಯಡಿಯೂರಪ್ಪ ಅವರು ನೀಡಿರುವ ಕೊಡುಗೆಗಳನ್ನು ಹೇಳಲು ಪದಗಳಿಂದ ಸಾಧ್ಯವಿಲ್ಲ. ಅವರು ದಶಕಗಳ ಕಾಲ ದುಡಿದು, ಕರ್ನಾಟಕದಾದ್ಯಂತ ಸಂಚರಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಯಡಿಯೂರಪ್ಪ ಅವರ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸಿದ ಪ್ರಧಾನಿ ಮೋದಿ, "ಬೊಮ್ಮಾಯಿ ಅವರು ಸಾಕಷ್ಟು ಶಾಸಕಾಂಗ ಹಾಗೂ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದು, ಸರ್ಕಾರದ ಕಾರ್ಯ ಹಾಗೂ ಯೋಜನೆಗಳನ್ನು ಜನರಿಗೆ ಸೂಕ್ತವಾಗಿ ತಲುಪಿಸುತ್ತಾರೆ ಎನ್ನುವ ಭರವಸೆ ನನಗಿದೆ. ಅವರಿಗೆ ಶುಭವಾಗಲಿ" ಎಂದು ತಿಳಿಸಿದ್ದಾರೆ.