ಜಮ್ಮು, ಜು 28 (DaijiworldNews/PY): ಮೇಘ ಸ್ಪೋಟದಿಂದ ಪ್ರವಾಹ ಉಂಟಾದ ಪರಿಣಾಮ 5 ಮಂದಿ ಮೃತಪಟ್ಟು, 25ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತವಾರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
"ದಚ್ಚನ್ ತಾಲೂಕಿನ ಹೊಂಝಾರ್ ಗ್ರಾಮದಲ್ಲಿ ಮೇಘ ಸ್ಪೋಟದ ಪರಿಣಾಮ ದಿಢೀರ್ ಪ್ರವಾಹ ಸಂಭವಿಸಿದ್ದು, ಐದು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಪ್ರವಾಹದ ಪರಿಣಾಮ ಆರು ಮನೆಗಳು ಕೊಚ್ಚಿ ಹೋಗಿವೆ" ಎಂದು ಜಿಲ್ಲಾ ಅಭಿವೃದ್ದಿ ಆಯುಕ್ತ ಅಶೋಕ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ.
"ಘಟನಾ ಸ್ಥಳಕ್ಕೆ ಸೇನೆ, ಪೊಲೀಸ್ ಹಾಗೂ ಎಸ್ಡಿಆರ್ಎಫ್ ತಂಡಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. 60 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ" ಎಂದಿದ್ದಾರೆ.
"ಜುಲೈ 27ರ ಮಂಗಳವಾರ ರಾತ್ರಿ ಲಂಬಾರ್ಡ್ ಪ್ರದೇಶದಲ್ಲೂ ಕೂಡಾ ಮೇಘ ಸ್ಪೋಟ ಸಂಭವಿಸಿದ್ದು, ಹಾನಿ ಬಗ್ಗೆ ವರದಿಯಾಗಿಲ್ಲ" ಎಂದು ಹೇಳಿದ್ದಾರೆ.
"ಕೆಲವು ದಿನಗಳಿಂದ ಜಮ್ಮುವಿನ ಬಹುತೇಕ ಭಾಗಗಳಲ್ಲ ಸತತ ಮಳೆಯಾಗುತ್ತಿದೆ. ಈ ವಾರದ ಅಂತ್ಯದವರೆಗೂ ಭಾರೀ ಮಳೆಯಾಗುವು ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆ , ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ" ಎಂದು ಜಿಲ್ಲಾಡಳಿತ ಹೇಳಿದೆ.