ಬೆಂಗಳೂರು, ಜು 28 (DaijiworldNews/PY): "ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿದ್ದಾರೆಯೇ ಹೊರತು ಪಕ್ಷ ಬದಲಾಗಿಲ್ಲ. ರಾಜ್ಯದಲ್ಲಿ ಈಗಲೂ ಬಿಜೆಪಿ ಸರ್ಕಾರವೇ ಇದೆ" ಎಂದು ಮಾಜಿ ಸಚಿವ ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶುಭಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ನೂತನ ಸಿಎಂ ಆಯ್ಕೆಯಾಗಿದ್ದಾರೆ. ಬಿಎಸ್ವೈ ಅವರು ಬಿಜೆಪಿಯಲ್ಲಿಯೇ ಇದ್ದಾರೆ. ಪಕ್ಷಸಂಘಟನೆಗೂ ಕೂಡಾ ಯಡಿಯೂರಪ್ಪ ಅವರ ಮಾರ್ಗದರ್ಶನವಿದೆ. ಮುಂದೆಯೂ ಬಿಜೆಪಿಯೇ ಆಡಳಿತಕ್ಕೆ ಬರುತ್ತದೆ" ಎಂದಿದ್ದಾರೆ.
"ಎಲ್ಲರಿಗೂ ಯಡಿಯೂರಪ್ಪ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ಯಡಿಯೂರಪ್ಪ, ಹಿರಿಯರು ಅನುಭವಿಗಳು ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಅದೇ ಅವರು ನಡೆಯುತ್ತಾರೆ. ಸಚಿವ ಸ್ಥಾನಕ್ಕಾಗಿ ನಾವು ಯಾರ ಮೇಲೂ ಕೂಡಾ ಒತ್ತಡ ತರುವುದಿಲ್ಲ. ಬೆಂಗಳೂರನ್ನು ನಂಬಿ ಬಂದಿದ್ದೇವೆ. ದೆಹಲಿ ವರಿಷ್ಟರು ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.