ಬೆಂಗಳೂರು, ಜು. 27 (DaijiworldNews/SM): ನೂತನ ಸಿಎಂ ಆಗಿ ಆಯ್ಕೆಯಾದ ಬಳಿಕ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಸೇವೆಗೆ ನಾನು ಬದ್ಧವಾಗಿದ್ದೇನೆ ಎಂದಿದ್ದಾರೆ.
ಶಾಸಕರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಶಾಸಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸದಂತೆ ಕೆಲಸ ಮಾಡುತ್ತೇನೆ. ಹಣಕಾಸಿನ ಬಿಕ್ಕಟ್ಟು ಸೇರಿಂದ ಸದ್ಯ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೇವೆ. ರೈತರು, ಬಡವರು, ಸಂಕಷ್ಟದಲ್ಲಿರುವವರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
ಹಿರಿಯ ನಾಯಕರು, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇತರ ನಾಯಕರ ಆಶೀರ್ವಾದ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ ಎಂದು ನೂತನ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ನನಗೆ ಯಾವುದೇ ಷರತ್ತು ವಿಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಿ.ಎಸ್. ಯಡಿಯೂರಪ್ಪ ಎಂದೆಂದಿಗೂ ನಮ್ಮ ನಾಯಕ ಎಂದು ನೂತನ ಸಿಎಂ ಹೇಳಿದ್ದಾರೆ.