ಬೆಂಗಳೂರು, ಜು. 27 (DaijiworldNews/SM): ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ಆ ಮೂಲಕ ಕಳೆದ ಹಲವು ದಿನಗಳಿಂದ ಯಾರಾಕ್ತಾರೆ ರಾಜ್ಯದ ಮುಂದಿನ ಸಿಎಂ ಎನ್ನುವ ಚರ್ಚೆಗೆ ತೆರೆ ಬಿದ್ದಂತಾಗಿದೆ.
ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು ಬಿ.ಎಸ್. ಯಡಿಯೂರಪ್ಪ ಅವರಿಂದ ಪಕ್ಷ ರಾಜೀನಾಮೆ ಪಡೆದುಕೊಂಡಿತ್ತು. ಅದರಂತೆ ಜುಲೈ 26ರಂದು ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿತ್ತು. ಜಾತಿವಾರು ಲೆಕ್ಕಾಚಾರಗಳ ಪ್ರಕಾರ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದವು. ಆದರೆ, ಇದೀಗ ಕಡೇ ಗಳಿಗೆಯಲ್ಲಿ ಬಸವರಾಜ್ ಬೊಮ್ಮಾಯಿಯವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿಯವರನ್ನು ಆಯ್ಕೆ ಮಾಡಲಾಗಿದೆ.
ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪವರು ಬಸವರಾಜ್ ಬೊಮ್ಮಾಯಿಯವರ ಹೆಸರು ಪ್ರಸ್ತಾಪಿಸಿದರು. ಗೋವಿಂದ ಕಾರಜೋಳ ಅನುಮೋದಿಸುವ ಮೂಲಕ ಬೊಮ್ಮಾಯಿಯವರು ನೂತನ ಸಿಎಂ ಆಗಿ ಹೊರ ಹೊಮ್ಮಿದ್ದಾರೆ.