ನವದೆಹಲಿ, ಜು 27 (DaijiworldNews/MS): 2019 ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಯಮಗಳನ್ನು ರೂಪಿಸಲು ಜನವರಿ 9 ರವರೆಗೆ ಕಾಲಾವಕಾಶ ಬೇಕು ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರೈ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು.
ಸಿಎಎ ಅನ್ವಯ ನಿಯಮಗಳನ್ನು ರೂಪಿಸಲು ನೀಡಿದ್ದ ಗಡುವನ್ನು ಸರ್ಕಾರ ಮೀರಿದೆಯೇ ಮತ್ತು ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ನಿತ್ಯಾನಂದ ಅವರು, ಕಾಯ್ದೆಯ ಅಧಿಸೂಚನೆಯನ್ನು 2019ರ ಡಿಸೆಂಬರ್ 12 ರಂದು ಹೊರಡಿಸಲಾಗಿದೆ. 2020ರ ಜನವರಿ 10ರಿಂದ ಕಾಯ್ದೆ ಜಾರಿಗೆ ಬಂದಿದೆ' ಎಂದು ಹೇಳಿದರು.
ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಯಮಗಳನ್ನು ರೂಪಿಸಲು ಜನವರಿ 9ರ ತನಕ ಸಮಯ ನೀಡುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳಿಗೆ ಕೋರಲಾಗಿದೆ' ಎಂದು ಅವರು ತಿಳಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಸಿಎಎ ಉದ್ದೇಶಿಸಿದೆ.ಈ ನಿಯಮಗಳನ್ನು ರೂಪಿಸಲು ಸರ್ಕಾರ ಕೋರಿರುವ ಐದನೇ ವಿಸ್ತರಣೆಯಾಗಿದೆ.