ಬೆಳಗಾವಿ, ಜು.27 (DaijiworldNews/HR): "ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇದ್ದರೂ ಇರದಿದ್ದರೂ ನಮಗೆ ಲಾಭವಿಲ್ಲ. ಆದರೆ ಈ ಬೇಳವಣಿಗೆಯಿಂದ 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ದಾರಿ ಸುಗಮವಾಯಿತು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನೂರು ಜನ ಸಿದ್ದರಾಮಯ್ಯ ಬಂದರೂ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, "2013ರಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ದರು ಆದರೆ ನಾವು ಅಧಿಕಾರಕ್ಕೆ ಬರಲಿಲ್ವಾ? ಮಿಸ್ಟರ್ ಯಡಿಯೂರಪ್ಪ ಯಾವತ್ತಾದ್ರೂ ನಿಮಗೆ ಮೆಜಾರಿಟಿ ಬಂತಾ. ಸರಳ ಬಹುಮತದಿಂದ ಎಂದಾದರೂ ಆರಿಸಿ ಬಂದಿದ್ದರೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಸಂಪೂರ್ಣ ಮನೆ ಬಿದ್ದರೆ ಐದು ಲಕ್ಷ ಕೊಡುತ್ತೇನೆ ಎಂದಿದ್ದರು. ಆ ಹಣವನ್ನ ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ದರೆ ಒಂದು ಪರಿಹಾರ, ಬಿಜೆಪಿ ಶಾಸಕರಿದ್ದರೆ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುಳ್ಳು ಕೇಸ್ ಗಳನ್ನು ಹಾಕುತ್ತಿದ್ದಾರೆ, ಅದನ್ನು ಹಾಕದಂತೆ ಎಸ್ಪಿ ಗೆ ಹೇಳಿದ್ದೇನೆ" ಎಂದು ಹೇಳಿದ್ದಾರೆ.