ಬೆಂಗಳೂರು, ಜು 27 (DaijiworldNews/MS): ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಮುಂದಿನ ಸಿಎಂ ಯಾರಾಗಬಹುದು ಎಂಬ ಚರ್ಚೆ ಭಾರೀ ಜೋರಾಗಿ ಕೇಳಿಬರುತ್ತಿದೆ.
ಈ ನಡುವೆ ಇಂದು ಸಂಜೆ 7.30 ಕ್ಕೆ ಬಿಜೆಪಿ ಶಾಸಕಾಂಗ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಿಎಂ ಆಯ್ಕೆ ಬಗ್ಗೆ ಕೇಂದ್ರದ ಬಿಜೆಪಿ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ನೂತನ ಮುಖ್ಯಮಂತ್ರಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ನೇಮಕ ಮಾಡಿರುವ ವೀಕ್ಷಕ ಧರ್ಮೆಂದ್ರ ಪ್ರಧಾನ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕೆಲ ಹೊತ್ತಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.
ಇನ್ನು ಇಂದಿನ ಬೆಳವಣಿಗೆಗಳ ಬಳಿಕ ಇಂದೇ ನೂತನ ಸಿಎಂ ಹೆಸರನ್ನು ಪ್ರಕಟ ಮಾಡುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.