ಮುಂಬೈ, ಜು 27 (DaijiworldNews/MS): ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 19 ರಿಂದ ಬಂಧನದಲ್ಲಿರುವ ಕುಂದ್ರಾ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ಮುಂಬೈನ ನ್ಯಾಯಾಲಯ ವಿಸ್ತರಿಸಿತ್ತು.
ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ರಾಜ್ ಕುಂದ್ರಾ ಜತೆ ನಿರ್ಮಾಪಕ ರೋಮಾ ಖಾನ್, ನಿರ್ದೇಶಕ ತನ್ವೀರ್ ಹಶ್ಮಿ ಮತ್ತು ಕುಂದ್ರಾ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಉಮೇಶ್ ಕಾಮತ್ ಸೇರಿ ಒಟ್ಟು 11 ಮಂದಿ ಬಂಧನಕ್ಕೊಳಗಾಗಿದ್ದರು.