ನವದೆಹಲಿ, ಜು.27 (DaijiworldNews/HR): "ಸಚಿವ ಅಮಿತ್ ಶಾ ಅವರು ದ್ವೇಷ ಮತ್ತು ಅಪನಂಬಿಕೆಯನ್ನು ಜನರಲ್ಲಿ ಬಿತ್ತುವ ಮೂಲಕ ದೇಶವನ್ನು 'ವಿಫಲ'ಗೊಳಿಸಿದ್ದು ಈಗ ಇದರ ಪರಿಣಾಮಗಳನ್ನು ದೇಶ ಎದುರಿಸುತ್ತಿದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
"ಅಸ್ಸಾಂ ಮತ್ತು ಮಿಜೋರಾಂ ನಡುವಿಣ ಗಡಿ ಸಂಘರ್ಷದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಐವರು ಪೊಲೀಸರು ಮೃತಪಟ್ಟಿದ್ದು, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಮಿಜೋರಾಂ ಪೊಲೀಸರು ಮೊದಲು ತಮ್ಮ ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಅಸ್ಸಾಂ ಸರ್ಕಾರ ಸೋಮವಾರ ಆರೋಪಿಸಿದೆ.
ಇನ್ನು ಈ ಬಗ್ಗೆ ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಅಮಿತ್ ಶಾ ಅವರು, "ವಿವಾದಿತ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.