ಬೆಂಗಳೂರು, ಜು 27 (DaijiworldNews/MS): ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಬಗ್ಗೆ ಪ್ರಶ್ನೆ ಎತ್ತಿದ್ದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಮಂಗಳವಾರ ತಿರುಗೇಟು ನೀಡಿದೆ.
ತನ್ನ ಅಧಿಕೃತ ತ್ವಿಟರ್ ಖಾತೆಯ ಮೂಲಕ ಟ್ವಿಟ್ ಮಾಡಿರುವ ಬಿಜೆಪಿ " ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವೀರೇಂದ್ರ ಪಾಟೀಲ ಅವರನ್ನು ಅನಾರೋಗ್ಯದಲ್ಲಿರುವಾಗಲೇ, ವಿಮಾನ ನಿಲ್ದಾಣದಲ್ಲಿ ರಾಜೀವ್ ಗಾಂಧಿ "ಮುಖ್ಯಮಂತ್ರಿ ಪದವಿಯಿಂದ ಕಿತ್ತೆಸೆದದ್ದನ್ನು" ರಾಜ್ಯದ ಜನತೆ ಮರೆತಿಲ್ಲ. ಅಂದ ಹಾಗೆ ನಿಮ್ಮ ʼರಾಜಕೀಯ ನಿವೃತ್ತಿʼ ಪ್ರಹಸನಕ್ಕೆ ಕೊನೆಯೆಂದು? ಎಂದು ಪ್ರಶ್ನಿಸಿದೆ.
ವಲಸೆ ನಾಯಕ ಸಿದ್ದರಾಮಯ್ಯನವರೇ, ರಾಜಕಾರಣದ ಇತಿಹಾಸವನ್ನು ಮೊದಲು ತಿಳಿದುಕೊಳ್ಳಿ.ನೀವೇ ಆರಾಧಿಸುವ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ ಕೂಡಾ ವಿಧಾನಸಭೆ ವಿಸರ್ಜನೆಗೆ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರೆಲ್ಲ ಏಕೆ ನಡುವೆ ನಿರ್ಗಮಿಸಿದ್ದೇಕೆ? ಎಂದು ಕೇಳಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ರೂಢಿ. ಆದರೆ, ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ. ಯಡಿಯೂರಪ್ಪ ಅವರ ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ ಅವರ ಸರ್ಕಾರದ ಭ್ರಷ್ಟಾಚಾರವೇ ಎಂದು ಕೇಳಿದ್ದರು.