ಚಾಮರಾಜನಗರ, ಜು.27 (DaijiworldNews/HR): ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಕ್ಕೆ ಬಿಎಸ್ವೈ ಅಭಿಮಾನಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ರವಿ (35) ಎಂದು ಗುರುತಿಸಲಾಗಿದೆ.
ಯಡಿಯೂರಪ್ಪನವರ ಅಭಿಮಾನಿಯಾಗಿದ್ದ ರವಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಬಿಎಸ್ವೈ ಸಿಎಂ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಘೋಷಣೆ ಮಾಡಿದ ವಿಡಿಯೋವನ್ನು ಪದೇಪದೆ ನೋಡಿದ ರವಿ, ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದು ಬೇಸರ ತಂದಿದೆ ಎಂದು ಗ್ರಾಮದ ಗುರುಸ್ವಾಮಿ ಬಳಿ ಹೇಳಿಕೊಂಡಿದ್ದ. ರಾತ್ರಿವರೆಗೂ ಇದೇ ಬೇಸರದಲ್ಲಿದ್ದು, ಬೆಳಗ್ಗೆ ಅವನ ಕ್ಯಾಂಟೀನ್ ಬಳಿಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಇನ್ನು ಬಿ.ಎಸ್.ಯುಡಿಯೂರಪ್ಪ ಮೇಲೆ ರವಿ ಇಟ್ಟಿದ್ದ ಅಭಿಮಾನ ಕಂಡು ಊರಿನ ಜನ ಅವನನ್ನು ರಾಜಾಹುಲಿ ಎಂದೇ ಕರೆಯುತ್ತಿದ್ದು, 2017ರಲ್ಲಿ ನಡೆದ ಉಪಚುನಾವಣೆಗೆ ಹಾಲಿ ಶಾಸಕ ನಿರಂಜನ್ ಕುಮಾರ್ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಲು ಗುಂಡ್ಲುಪೇಟೆಗೆ ಆಗಮಿಸಿದ್ದು, ಈ ವೇಳೆ ಅವರ ಜತೆಗೆ ರವಿ ಊರುಕೇರಿಗಳನ್ನು ಸುತ್ತಿದ್ದ ಎಂದು ವರದಿಯಾಗಿದೆ.