ಮುಂಬೈ, ಜು 27 (DaijiworldNews/MS): ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಪ್ರಕರಣ ಸಂಬಂಧ ರಾಜ್ಕುಂದ್ರಾ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.
ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಜುಲೈ 19 ರಂದು ರಾಜ್ ಕುಂದ್ರಾ ಜತೆ ನಿರ್ಮಾಪಕ ರೋಮಾ ಖಾನ್, ನಿರ್ದೇಶಕ ತನ್ವೀರ್ ಹಶ್ಮಿ ಮತ್ತು ಕುಂದ್ರಾ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಉಮೇಶ್ ಕಾಮತ್ ಅವರು ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದಲ್ಲಿ ಒಟ್ಟು 11 ಮಂದಿ ಬಂಧನಕ್ಕೊಳಗಾಗಿದ್ದರು.
ಇನ್ನು ರಾಜ್ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಆರ್ಥಿಕ ಮೂಲ ಮತ್ತು ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್ ಹಣಕಾಸು ಲೆಕ್ಕ ಪರಿಶೋಧಕರನ್ನು ನೇಮಿಸಿದೆ.
ತನಿಖೆಯಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್ಕುಂದ್ರಾ ಅವರ ಜಂಟಿ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಕುಂದ್ರಾ ಅವರ ನಾಲ್ವರು ನೌಕರರು ಆತನ ವಿರುದ್ಧ ಸಾಕ್ಷಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.