ನವದೆಹಲಿ, ಜು. 26 (DaijiworldNews/SM): ನಾನು ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದೇನೆ. ಮಂಗಳೂರಿನಿಂದ ನೇರವಾಗಿ ದೆಹಲಿಗೆ ಬಂದಿದ್ದೇನೆ. ನಾನು ಸಂಘಟನೆಯ ಜವಾಬ್ದಾರಿ ಇರುವವನು. ನನಗೆ ಸಂಘಟನೆಯದ್ದೇ ಕೆಲಸ ಹೊರತಾಗಿ ಯಾವುದೇ ರೇಸ್ ನಲ್ಲಿ ನಾನಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ಈ ನಡುವೆ ದೆಹಲಿಯಿಂದ ಪ್ರತಿಕ್ರಿಯೆ ನೀಡಿರುವ ನಳಿನ್, ಮುಂದಿನ ೨ ವರ್ಷಗಳ ಕಾಲ ಪಕ್ಷ ಸಂಘಟನೆ ನನ್ನ ಜವಾಬ್ದಾರಿಯಾಗಿದೆ. ಮುಂದಿನ ಚುನಾವಣೆಯಲ್ಲೂ ಪಕ್ಷ ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ನಮ್ಮ ರಾಷ್ಟ್ರೀಯ ನಾಯಕರು ಎಲ್ಲರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಸಿಎಂ ಯಾರಗಬೇಕೆಂದು ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮವಾಗಿದೆ. ಅವರು ಎಲ್ಲರಲ್ಲಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುತ್ತಾರೆ. ಆ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂಬುವುದಾಗಿ ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.