ಬೆಂಗಳೂರು, ಜು 26 (DaijiworldNews/PY): 'ರಾಜಾಹುಲಿ' ಬಿರುದಾಂಕಿತ ಯಡಿಯೂರಪ್ಪ ವಾಸ್ತವವಾಗಿ 'ಪೇಪರ್ ಟೈಗರ್' ಆಗಿಯೇ ಉಳಿದುಬಿಟ್ಟರು ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಯಡಿಯೂರಪ್ಪ ಉತ್ತಮ ಹೋರಾಟಗಾರರೇ ಹೊರತು ಉತ್ತಮ ಆಡಳಿತಗಾರರಾಗಿರಲಿಲ್ಲ. 4 ಬಾರಿ ರಾಜ್ಯದ ಸಿಎಂ ಆಗಿದ್ದರೂ ಜನ ನೆನಪಲ್ಲಿಟ್ಟುಕೊಳ್ಳುವಂತಹ ಆಡಳಿತ ನೀಡಲಿಲ್ಲ. ಆಡಳಿತದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಿತಿ ಮೀರಿ ಹೋಗಿತ್ತು. ವರ್ಗಾವಣೆ ದಂಧೆ, ಕಮೀಷನ್ ದಂಧೆಗಳಿಗೆ ಕಡಿವಾಣವಿರಲಿಲ್ಲ. ಕೊನೆಯ ಅವಧಿಯ 2 ವರ್ಷದಲ್ಲೂ ಬಿಎಸ್ವೈ ಸಾಧನೆ ಶೂನ್ಯವಾಗಿತ್ತು" ಎಂದಿದ್ದಾರೆ.
ಚೆಕ್ ಮೂಲಕ ಲಂಚ ಪಡೆದಿದ್ದು, ಡಿ-ನೋಟಿಫಿಕೇಶನ್ ಹಗರಣ, ಆಡಳಿತದಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಯಡಿಯೂರಪ್ಪ ಆಡಳಿತದ ಅತಿ ದೊಡ್ಡ ಮೈನಸ್ ಪಾಯಿಂಟ್. 'ಆಪರೇಷನ್ ಕಮಲ'ದ ಸೃಷ್ಟಿಕರ್ತರು ಕೂಡ ಯಡಿಯೂರಪ್ಪನವರೆ. ರಾಜಕೀಯ ಇತಿಹಾಸದಲ್ಲಿ ಬಿಎಸ್ವೈ, 'ಆಪರೇಷನ್ ಕಮಲ' ಸೃಷ್ಟಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ ಕಳಂಕಿತ ವ್ಯಕ್ತಿಯಾಗಿಯೇ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಹೊಗಳುಭಟರಿಂದ 'ರಾಜಾಹುಲಿ' ಎಂದು ಕರೆಸಿಕೊಳ್ಳುತ್ತಿದ್ದ ಯಡಿಯೂರಪ್ಪ, ತಮ್ಮ ಆಡಳಿತದಲ್ಲಿ ಯಾವತ್ತೂ ಹುಲಿಯಂತೆ ನಡೆದುಕೊಳ್ಳಲೇ ಇಲ್ಲ. ಕೇಂದ್ರದ ಆಜ್ಞೆಗಳನ್ನು ಶಿರ ಬಗ್ಗಿಸಿ ಪಾಲಿಸುವ ಆಜ್ಞಾನುವರ್ತಿಯಾದರೇ ಹೊರತು ತಲೆ ಎತ್ತಿ ನಡೆದವರೇ ಅಲ್ಲ. ಕೇಂದ್ರದಿಂದ ಬರಬೇಕಾದ ಜಿಎಸ್ಟಿ ಪಾಲು ಕೇಳಲಿಲ್ಲ. ನೆರೆ ಪರಿಹಾರ ಕೇಳಲು ಧ್ವನಿಯೇ ಇರಲಿಲ್ಲ ಎಂದಿದ್ದಾರೆ.
'ರಾಜಾಹುಲಿ' ಬಿರುದಾಂಕಿತ ಯಡಿಯೂರಪ್ಪ ವಾಸ್ತವವಾಗಿ 'ಪೇಪರ್ ಟೈಗರ್' ಆಗಿಯೇ ಉಳಿದುಬಿಟ್ಟರು. 8 ಬಾರಿ ಬಜೆಟ್ ಮಂಡಿಸಿದ್ದರೂ, ಅವರ ಆಡಳಿತದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಯಿತು. ಬಿಎಸ್ವೈ ಆಡಳಿತ ವೈಫಲ್ಯದ ನೇರ ಪರಿಣಾಮವನ್ನು ಜನರು ಅನುಭವಿಸವಂತಾಯಿತು. ಕೋವಿಡ್ನ್ನು ಅತ್ಯಂತ ಕಳಪೆಯಾಗಿ ನಿಭಾಯಿಸಿದ ಕುಖ್ಯಾತಿ ಕೂಡ ಬಿಎಸ್ವೈಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.