ಬೆಂಗಳೂರು, ಜು 26 (DaijiworldNews/PY): "ಇದು ಕೇವಲ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರು ಯಾರು? ಎನ್ನುವುದನ್ನು ರಾಜ್ಯದ ಜನತೆಗೆ ಹೇಳಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರ ರಾಜೀನಾಮೆಯ ಹಿಂದ ಸಂತೋಷ ಕಾಣಿಸುತ್ತಿಲ್ಲ. ಬದಲಾಗಿ ಅವರು ಕೈಗೊಂಡ ತೀರ್ಮಾನದಲ್ಲಿ ನೋವು ಕಾಣಿಸುತ್ತಿದೆ. ಆ ನೋವು ಏನು ಹಾಗೂ ನೋವು ಕೊಟ್ಟವರು ಯಾರು ಎನ್ನುವುದನ್ನು ಯಡಿಯೂರಪ್ಪ ಅವರು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು" ಎಂದಿದ್ದಾರೆ.
"ರಾಜೀನಾಮೆ ಬಗೆಗಿನ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ, ಅದಕ್ಕೂ ಮುನ್ನ ಸಿಎಂ ಅವರು ತನ್ನ ನೋವಿನ ವಿಚಾರದ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೊರೊನಾ ಸಮಸ್ಯೆಗೆ ತುತ್ತಾಗಿರುವುದರಿಂದ ನೋವಾಯಿತಾ?. ಹೈಕಮಾಂಡ್, ಪಕ್ಷದ ಶಾಸಕರನ್ನು ನಿಯಂತ್ರಣ ಮಾಡಲಿಲ್ಲ ಎಂದು ನೋವಾಯಿತಾ? ಎನ್ನುವುದನ್ನು ಜನರಿಗೆ ತಿಳಿಸಬೇಕು" ಎಂದು ಹೇಳಿದ್ದಾರೆ.