ನವದೆಹಲಿ, ಜು.26 (DaijiworldNews/HR): ಕೊರೊನಾದಂತಹ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಕರೆನ್ಸಿ ನೋಟುಗಳ ಮುದ್ರಣ ಯೋಜನೆ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾದಿಂದಾದ ಉದ್ಯೋಗ ನಷ್ಟವನ್ನು ತಪ್ಪಿಸಲು ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ಕರೆನ್ಸಿ ನೋಟುಗಳ ಮುದ್ರಣದ ಆಯ್ಕೆಯನ್ನು ಪರಿಗಣಿಸುವಂತೆ ಹಲವು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಲಹೆ ನೀಡಿದ್ದು, ಭಾರತದ ರಿಯಲ್ ಜಿಡಿಪಿ ಕೂಡ ಕುಸಿತ ಕಂಡಿದ್ದು ಈ ಕುಸಿತ ಸಾಂಕ್ರಾಮಿಕದ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳನ್ನು ಸೂಚಿಸುತ್ತವೆ" ಎಂದರು.
ಇನ್ನು ಕೊರೊನಾ ತಡೆಗಟ್ಟುವುದಕ್ಕೆ 2020-21 ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪುನರುಜ್ಜೀವನ ನೀಡುವುದಕ್ಕಾಗಿ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸರ್ಕಾರ 29.87 ಲಕ್ಷ ಕೋಟಿಯ ಸಮಗ್ರ ಪ್ಯಾಕೇಜ್ ಅನ್ನು ಘೋಷಿಸಿತ್ತು ಎಂದು ತಿಳಿಸಿದ್ದಾರೆ.